ಅನುದಾನಿತ ಸಂಸ್ಥೆಗಳ ಪಿಂಚಣಿ ವಂಚಿತ ನೌಕರರಿಂದ ಬೆಳಗಾವಿ ಅಧಿವೇಶನದ ವೇಳೆ ಪ್ರತಿಭಟನೆ

ಮೈಸೂರು:  ಅನುದಾನಿತ ಸಂಸ್ಥೆಗಳ ನೌಕರರಿಗೆ ಹಳೆಯ ಪಿಂಚಣಿ ಜಾರಿಗಾಗಿ ಸರ್ಕಾರದ ಗಮನ ಸೆಳೆಯಲು ಈ ಬಾರಿಯ ಬೆಳಗಾವಿ ಅಧಿವೇಶನ ವೇಳೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳು ಪಿಂಚಣಿ ವಂಚಿತ ನೌಕರರ ಸಂಘದ ಅಧ್ಯಕ್ಷ ಸಿಂಡನಹಳ್ಳಿ ಡಾ.ಎಸ್.ಎಂ.ಶರತ್‍ಕುಮಾರ್ ತಿಳಿಸಿದರು. ಸರ್ಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಈ ಹಿಂದೆ ಇದ್ದ ಸಮಾನ ಪಿಂಚಣಿಯ ಹಳೆಯ ವ್ಯವಸ್ಥೆ ಕೈಬಿಟ್ಟು ಎನ್‍ಪಿಎಸ್ ಜಾರಿಗೆ ತಂದ ನಂತರ ಖಾಸಗಿ ಅನುದಾನಿತ ನೌಕರರನ್ನು ಕೈಬಿಡಲಾಗಿದೆ. ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರು ಪಿಂಚಣಿ ವಂಚಿತರಾಗಿದ್ದಾರೆ. ಈ ಸಂಬಂಧ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸರ್ಕಾರ ತಾತ್ಸಾರ ಭಾವನೆಯಿಂದ ವರ್ತಿಸಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಅವರು ಭಾನುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಮ್ಮ ಅನುದಾನಕ್ಕೆ ಪೂರ್ವದ ನ್ಯಾಯಯುತ ಸೇವೆಯೇ ಕಾಲ್ಪನಿಕವೆಂದು ಪರಿಗಣಿಸಿ ಪಿಂಚಣಿ ನೀಡಬೇಕು. ಪ್ರತಿಯೊಬ್ಬ ಅನುದಾನಿತ ವಿದ್ಯಾಸಂಸ್ಥೆಯ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆ ಮಾಡಬೇಕು. ಸರ್ಕಾರಿ ನೌಕರರಿಗೆ ಇರುವ ವೈದ್ಯಕೀಯ ಸೌಲಭ್ಯಗಳನ್ನು ಅನುದಾನಿತ ನೌಕರರಿಗೂ ನೀಡಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಗಳಾಗಿದ್ದು, ಸರ್ಕಾರ ಮತ್ತೆ ನಮ್ಮ ಪ್ರತಿಭಟನೆಯನ್ನು ಕಡೆಗಣಿಸಿದರೆ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಬಿ.ಕೆ.ಲೋಕೇಶ್, ಕಾರ್ಯದರ್ಶಿ ಬಿ.ಆರ್. ಶಿವಕುಮಾರ್, ಪದಾಧಿಕಾರಿಗಳಾದ ಸಿದ್ದರಾಮು, ರಂಗಸ್ವಾಮಿ ಉಪಸ್ಥಿತರಿದ್ದರು.