ಮೈಸೂರು ವಿವಿ ಕ್ರಾಫರ್ಡ್ ಭವನದ ಮುಂದೆ ಪ್ರತಿಭಟನೆ 

ಮೈಸೂರು,ಆ.8(ಎಂಟಿವೈ)- ಮೈಸೂರು ವಿಶ್ವವಿದ್ಯಾ ನಿಲಯದಲ್ಲಿ ನಿಯಮ ಬಾಹಿರವಾಗಿ ನೇಮಕಾತಿ ನಡೆಸುತ್ತಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮೈಸೂರು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯ ಕರ್ತರು ಕ್ರಾಫರ್ಡ್ ಭವನದ ಮುಂದೆ ಪ್ರತಿಭಟಿಸಿದರು.

ಇತ್ತೀಚಿನ ದಿನಗಳಲ್ಲಿ ಮೈಸೂರು ವಿವಿಯು ನಿಯಮವನ್ನು ಗಾಳಿಗೆ ತೂರಲಾಗುತ್ತಿದೆ. ಅಧಿಕಾರಿಗಳು, ಕುಲಪತಿಗಳು ಅಕ್ರಮ ನೇಮಕಾತಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದರಿಂದ ಮೈಸೂರು ವಿವಿಗೆ ಕೆಟ್ಟ ಹೆಸರು ಬರುತ್ತಿದ್ದು, ನಗೆಪಾಟಲಿಗೀಡಾಗುತ್ತಿದೆ.  ರಾಜ್ಯಪಾಲರ ಆದೇಶವನ್ನು ಧಿಕ್ಕರಿಸಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಬಾರಿ ಕೊರತೆಯ ಬಜೆಟ್ ಮಂಡಿಸಿದ್ದು, ಈ ಮಧ್ಯೆಯೂ ಯಾವ ಆಧಾರದ ಮೇಲೆ ಅತಿಥಿ ಉಪ ನ್ಯಾಸಕರ ನೇಮಕ ಮಾಡಿಕೊಂಡಿದ್ದಾರೆ.  ಇದನ್ನು ದೊಡ್ಡ ಹಗರಣವೆಂದು ಪರಿಗಣಿಸಿ ತನಿಖೆ ನಡೆಸಬೇಕೆಂದು ಪ್ರತಿ ಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್‍ಕುಮಾರ್, ಮುಖಂಡ ರಾದ ಆನಂದ್, ಹೇಮಂತ್, ಲೋಕೇಶ್, ಮಂಜು, ರಫೀಕ್, ಶಿವರಾಜು, ಅಫೀಜ್, ಜಮೀರ್ ಭಾಗವಹಿಸಿದ್ದರು.