ನಾಲೆ ನೀರಿಗೆ ಆಗ್ರಹಿಸಿ ತುರಗನೂರಲ್ಲಿ ಪ್ರತಿಭಟನೆ

ಬನ್ನೂರು: ಪಟ್ಟಣ ಸಮೀಪದ ತುರಗನೂರಿನ ವಿಸಿ ನಾಲೆಗೆ ತಕ್ಷಣವೇ ನೀರು ಹರಿಸುವಂತೆ ಆಗ್ರಹಿಸಿ ತುರಗನೂರು ರೈತ ಮುಖಂಡರು ಕಾವೇರಿ ನೀರಾವರಿ ಕಚೇರಿ ಮುಂಭಾಗ ಗುರುವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾತನಾಡಿದ ಮುಖಂಡ ಬಿ.ಆರ್.ಮಂಜುನಾಥ್, ತಾಲೂಕಿನ ರೈತರು ನೀರಿಲ್ಲದೇ ಪರದಾಡುವಂತಾಗಿದೆ. ಅಂತರ್ಜಲ ಮಟ್ಟ ಕುಸಿದಿದೆ, ಕೆರೆ-ಕಟ್ಟೆಗಳು ಬತ್ತಿ ಹೋಗಿವೆ. ಜನ-ಜಾನುವಾರುಗಳಿಗೆ ಕುಡಿ ಯಲೂ ನೀರಿಲ್ಲದೇ ನಿತ್ಯವೂ ಪರದಾಡುವ ಸ್ಥಿತಿ ಇದೆ. ಇಷ್ಟೆಲ್ಲಾ ಸಮಸ್ಯೆ ಇರುವುದು ಗೊತ್ತಿದ್ದರೂ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಕಿಡಿಕಾರಿದರು. ನಿಗಮದ ಅಧಿಕಾರಿಗಳು ಕೂಡಲೇ ತುರಗುನೂರು ಶಾಖೆ ವಿಸಿ ನಾಲೆಗೆ ನೀರು ಹರಿಸಬೇಕು. ಈ ಭಾಗದ ರೈತರ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡ ನಾರಾಯಣ್ ಮಾತ ನಾಡಿ, ಕೆಆರ್‍ಎಸ್ ಅಣೆಕಟ್ಟೆಯಲ್ಲಿ ಸದ್ಯ 110 ಅಡಿಗಳಷ್ಟು ನೀರಿದೆ. ಈ ನೀರನ್ನು ರೈತರ ಉಪಯೋಗಕ್ಕಾಗಿ ಏಕೆ ಬಿಡುತ್ತಿಲ್ಲ. ವಿಸಿ ನಾಲೆ ತುರಗನೂರು ಶಾಖೆ ಇಂಜಿನಿ ಯರ್ ಕಚೇರಿಯಲ್ಲಿರುವುದೇ ಇಲ್ಲ. ಸಬೂಬು ಹೇಳುವ ಮಂದಿಯಷ್ಟೇ ಇದ್ದಾರೆ. ನೀರಾವರಿ ನಿಗಮದ ಅಧಿಕಾರಿಗಳು ತಕ್ಷಣ ತುರಗನೂರಿಗೆ ಭೇಟಿ ನೀಡಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ನಂತರ ರೈತರು, ಗ್ರಾಮಸ್ಥರು ಮೈಸೂರು -ಮಳವಳ್ಳಿ ಮುಖ್ಯ ರಸ್ತೆಯಲ್ಲಿ ವಾಹನ ತಡೆದು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗುತ್ತ ಪ್ರತಿಭಟನೆ ನಡೆಸಿದರು. ಆ ಬಳಿಕವಷ್ಟೇÀ ಸ್ಥಳಕ್ಕೆ ಧಾವಿಸಿದ ಕಾರ್ಯಪಾಲಕ ಇಂಜಿನಿ ಯರ್ ಬಸವರಾಜು, ರೈತರ ಸಮಸ್ಯೆ ಆಲಿಸಿದರು. ಸೂಪರಿಂಟೆಂಡೆಂಟ್ ಇಂಜಿನಿ ಯರ್ ಗಮನಕ್ಕೆ ತಂದು ಶುಕ್ರವಾರ ಬೆಳಿಗ್ಗೆ ನಾಲೆಗೆ ನೀರು ಹರಿಸಲು ಕ್ರಮ ಕೈಗೊಳ್ಳು ವುದಾಗಿ ಭರವಸೆ ನೀಡಿದರು. ಆ ಬಳಿಕ ರೈತರು ಪ್ರತಿಭಟನೆ ಕೊನೆಗೊಳಿಸಿದರು.

ನಾಗೇಂದ್ರ, ನವೀನ್ ಕುಮಾರ್, ಬಾಣಗ ವಾಡಿ ನಾರಾಯಣಸ್ವಾಮಿ, ಸೀಹಳ್ಳಿ ರಾಜೂಗೌಡ, ಮೇಗಳಕೊಪ್ಪಲಿನ ರಂಗಸ್ವಾಮಿ, ಅತ್ತಹಳ್ಳಿ ರಾಜು, ಕೃಷ್ಣ, ವಿಶೇಷ, ಟಿ.ಸಿ. ವೆಂಕಟೇಶ್, ರಾಮಲಿಂಗೇಗೌಡ, ಎಲ್.ಸ್ವಾಮಿ, ಪ್ರಸನ್ನ, ಮಾದೇಗೌಡ, ನಾಗರಾಜು, ಮಂಜು ನಾಥ, ಕುಮಾರ ಮಹೇಶ ಸೇರಿದಂತೆ ಹಲವಾರು ರೈತÀರು, ಮುಖಂಡರಿದ್ದರು.