ಮೈಸೂರು, ಜ. 18(ಆರ್‍ಕೆ)- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಮೈಸೂರಿನ ಬನ್ನಿಮಂಟಪದ ಸೇಂಟ್ ಫಿಲೋಮಿನಾ ಕಾಲೇಜು ಎದುರಿನ ಫಿರ್ದೋಸ್ ಮಸೀದಿ ಬಳಿ ಇಂದು ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿ ಪ್ರತಿಭಟನಾ ಧರಣಿ ನಡೆಸಿದರು.
ಬನ್ನಿಮಂಟಪ ವೆಲ್‍ಫೇರ್ ಅಸೋಸಿ ಯೇಷನ್ ಅಧ್ಯಕ್ಷ ಅಬ್ದುಲ್‍ಖಾದರ್ ಸೇಠ್ ಅವರ ನೇತೃತ್ವದಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆದ ಪ್ರತಿಭಟನೆಯಲ್ಲಿ ಸಿಎಎ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಸಿಎಎ, ಎನ್‍ಆರ್‍ಸಿ ಕಾಯ್ದೆಗಳು ಸಂವಿಧಾನ ವಿರೋಧಿ ಹಾಗೂ ಜನ ವಿರೋಧಿ ನೀತಿಯಾಗಿರುವುದರಿಂದ ತಕ್ಷಣ ಅವುಗಳನ್ನು ರದ್ದುಗೊಳಿಸಬೇಕು. ದೇಶದ ಅಲ್ಪಸಂಖ್ಯಾತರಿಗೆ ಮಾರಕವಾದ ಈ ಕಾಯ್ದೆಗೆ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದರೂ ಕಾಯ್ದೆ ಜಾರಿ ಮಾಡಿ ರುವುದು ಖಂಡನೀಯ ಎಂದು ಧರಣಿ ನಿರತರು ಘೋಷಣೆಗಳನ್ನು ಕೂಗು ತ್ತಿದ್ದರು. ಮೌಲಾನ ಜಕಾವಲ್ಲಾ, ಮೊಹ ಮದ್ ಮುಮ್ತಾಜ್ ಅಹಮದ್, ಶಬ್ಬೀರ್ ಮುಸ್ತಫಾ, ತಾಹಿರ್ ರೆಹಮಾನ್, ಯೂಸುಫ್ ಜಿದ್ದಾ, ಟಿ.ಪಿ ರಫೀಕ್, ಖೈಸರ್, ತನ್ವೀರ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು, ಎನ್.ಆರ್.ಠಾಣೆ ಪೊಲೀಸ್ ಇನ್‍ಸ್ಪೆಕ್ಟರ್ ಜಿ.ಶೇಖರ್ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.