ಕನ್ನಡ ಮಾಧ್ಯಮದಲ್ಲೇ ಇಂಗ್ಲಿಷ್ ಕಲಿಸಲು ಆಗ್ರಹಿಸಿ ಪ್ರತಿಭಟನೆ

ಮೈಸೂರು: ಮಾತೃ ಭಾಷೆ ಕನ್ನಡ ಮಾಧ್ಯಮದಲ್ಲೇ ಪ್ರಾಥಮಿಕ ಶಿಕ್ಷಣ ನೀಡುವುದರ ಜೊತೆಗೆ ಆಂಗ್ಲ ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಸುವು ದಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟದ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು. ನ್ಯಾಯಾಲಯದ ಮುಂಭಾಗದಲ್ಲಿರುವ ಗಾಂಧಿ ಪುತ್ಥಳಿ ಬಳಿಯಿಂದ ಡಿಸಿ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಡಿಸಿ ಕಚೇರಿ ಬಳಿ ಕೆಲಕಾಲ ಧರಣಿ ನಡೆಸಿ ಮನವಿ ಸಲ್ಲಿಸಿದರು. ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಮಗುವಿನ ಮೂಲಭೂತ ಹಕ್ಕು. ಮಕ್ಕಳ ತಜ್ಞರು, ಶಿಕ್ಷಣ ತಜ್ಞರು, ಸಾಹಿತಿಗಳು ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕೆಂದು ಈಗಾಗಲೇ ಹಲವಾರು ಬಾರಿ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಆಂಗ್ಲ ಭಾಷೆಯನ್ನು ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಕಲಿಸಬೇಕೆಂದು ಒತ್ತಾಯಿಸಿದರು.

ಒಕ್ಕೂಟದ ಅಧ್ಯಕ್ಷ, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ಮಾತನಾಡಿ, ಅಂಗನವಾಡಿಗಳನ್ನು ಬಲವರ್ಧನೆ ಮಾಡಿ ಪ್ರೀಕೆಜಿ, ಎಲ್‍ಕೆಜಿ, ಯುಕೆಜಿ ಪ್ರಾರಂಭಿಸಿ ಆಂಗ್ಲಭಾಷಾ ಶಿಕ್ಷಕರನ್ನು ನೇಮಿಸಬೇಕು. 1ರಿಂದ 5ನೇ ತರಗತಿವರೆಗೆ ಕನ್ನಡದ ಜೊತೆಗೆ ಆಂಗ್ಲಭಾಷೆ ಭಾಷೆಯಾಗಿ ಕಲಿಸಬೇಕು. 6ನೇ ತರಗತಿಯಿಂದ ತ್ರಿಭಾಷಾ ಸೂತ್ರ ಅನುಸರಿಸಿ ಆಂಗ್ಲ ಮಾಧ್ಯಮದಲ್ಲಿಯೇ ಕಲಿಸಬಹುದು. ಇದರಿಂದ ಗ್ರಾಮೀಣ ಮಕ್ಕಳು ಆಂಗ್ಲ ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಯಲು ಸಾಧ್ಯವಾಗುತ್ತದೆ ಎಂದರು.

ಪ್ರತಿಭಟನೆಯಲ್ಲಿ ಪೆÇ್ರ.ಪಿ.ವಿ. ನಂಜೇರಾಜ ಅರಸ್, ಕಾಯಕ ಸಮಾಜದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬೋರಪ್ಪ ಶೆಟ್ಟಿ, ಹುಣಸೂರು ತಾಲೂಕು ಅಧ್ಯಕ್ಷ ಹೊನ್ನಪ್ಪ, ಡಾ.ಪ್ರಸನ್ನಕುಮಾರ್, ಕುಮಾರಶೆಟ್ಟಿ, ಮಹದೇವ ಗಾಣಿಗ, ರಮೇಶ್, ತಿಮ್ಮಶೆಟ್ಟಿ, ರಾಜಣ್ಣ, ಚೆಲುವರಾಜ್, ಮಹದೇವ, ಪುಟ್ಟಣ್ಣಯ್ಯ, ಲೋಕೇಶ್, ಶ್ರೀನಿವಾಸರಾವ್, ನಟರಾಜ್, ಶ್ರೀನಿವಾಸ್, ಪ್ರಕಾಶ್ ಪಾಲ್ಗೊಂಡಿದ್ದರು.