ಹಾಸ್ಟೆಲ್‍ಗಳಿಗೆ ಗುಣಮಟ್ಟದ ಸೌಲಭ್ಯ ಕಲ್ಪಿಸಿ

ಚಾಮರಾಜನಗರ: ಜಿಲ್ಲೆಯಲ್ಲಿರುವ ವಿವಿಧ ಇಲಾಖೆಗಳ ನಿರ್ವಹಣೆಯ ಹಾಸ್ಟೆಲ್‍ಗಳಿಗೆ ಅಧಿಕಾರಿಗಳು ವ್ಯಾಪಕವಾಗಿ ಭೇಟಿ ನೀಡಿ ಮೂಲ ಸೌಕರ್ಯವನ್ನು ಅಭಿವೃದ್ಧಿಗೊಳಿಸುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ (ಎಂಎಸ್‍ಎಂಇ ಮತ್ತು ಗಣಿ) ಸರ್ಕಾರದ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾದ ರಾಜೇಂದ್ರಕುಮಾರ್ ಕಠಾರಿಯಾ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹಾಸ್ಟೆಲ್‍ಗಳ ನಿರ್ವಹಣೆಗಾಗಿ ಸರ್ಕಾರ ಹೆಚ್ಚು ಅನುದಾನ ನೀಡುತ್ತಿದೆ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡುವ ದಿಸೆಯಲ್ಲಿ ತೆರೆಯಲಾಗಿರುವ ಹಾಸ್ಟೆಲ್‍ಗಳಲ್ಲಿ ಸಮರ್ಪಕವಾಗಿ ಸೌಲಭ್ಯ ಕಲ್ಪಿಸಲಾಗಿದೆಯೆ? ಊಟ, ಕೊಠಡಿ, ಶುಚಿತ್ವ ಇನ್ನಿತರ ಅಗತ್ಯ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಲಾಗುತ್ತಿದೆಯೆ? ಎಂಬುದರ ಬಗ್ಗೆ ಅಧಿಕಾರಿಗಳು ಪ್ರವಾಸ ಕೈಗೊಂಡು ಪರಿಶೀಲಿಸಬೇಕು ಎಂದರು.

ನಗರ, ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಆರಂಭಿಸಿರುವ ಮೂಲಸೌಕರ್ಯ ಕಾಮಗಾರಿಯನ್ನು ತ್ವರಿತಗೊಳಿಸಬೇಕು. ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಬೇಕು. ಈ ಹಿಂದೆಯೇ ಕಾಮಗಾರಿ ಕಾರ್ಯಾದೇಶ ನೀಡಲಾಗಿರುವ ಕೆಲಸಗಳು ಏಕೆ ಕುಂಠಿತವಾಗುತ್ತಿವೆ ಎಂಬುದರ ಬಗ್ಗೆ ಪರಿಶೀಲಿಸಬೇಕು. ಕುಡಿಯುವ ನೀರಿನ ಕಾಮಗಾರಿ ವಿಳಂಬವಾಗದಂತೆ ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲೆಯ ಮಳೆ, ಬೆಳೆ, ಮೇವು ದಾಸ್ತಾನು ಪರಿಸ್ಥಿತಿ ಬಗ್ಗೆ ಪರಾಮರ್ಶೆ ನಡೆಸಿದ ಉಸ್ತುವಾರಿ ಕಾರ್ಯದರ್ಶಿಯವರು ಜಾನುವಾರುಗಳಿಗೆ ಕೊರತೆಯಾಗದಂತೆ ಮೇವು ದಾಸ್ತಾನು ಮಾಡಬೇಕು. ಈ ಹಿಂದೆ ತಲೆದೋರಿದ್ದ ಅಭಾವ ಪೀಡಿತ ಪ್ರದೇಶಗಳಲ್ಲಿ ಮೇವು ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಎಲ್ಲಾ ಭಾಗಗಳಲ್ಲಿಯೂ ಸಹ ಮೇವು ಸಮರ್ಪಕವಾಗಿ ದೊರೆಯಲು ಅಗತ್ಯವಿರುವ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ಹೋಬಳಿ, ಗ್ರಾಮವಾರು ಮಟ್ಟದಲ್ಲಿ ಎಷ್ಟು ಮೇವು ದಾಸ್ತಾನು ಇದೆ ಎಂಬುದರ ಬಗ್ಗೆ ನಿಖರವಾಗಿ ಮಾಹಿತಿ ಸಂಗ್ರಹಣೆ ಮಾಡಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯವಹಿಸಿದರೆ ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸಾಮಾಜಿಕ ಭದ್ರತಾ ಯೋಜನೆಯನ್ನು ಪರಿಶೀಲಿಸಿದ ಉಸ್ತುವಾರಿ ಕಾರ್ಯದರ್ಶಿಯವರು ಪಿಂಚಣಿ ಅರ್ಜಿಗಳನ್ನು ಶೀಘ್ರ ಕೈಗೆತ್ತಿಕೊಂಡು ವಿಲೇವಾರಿ ಮಾಡಿ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಬೇಕು. ಪೋಡಿ ಪ್ರಕರಣಗಳನ್ನು ಸಹ ಬಾಕಿ ಇಲ್ಲದಂತೆ ಇತ್ಯರ್ಥಗೊಳಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಮಾತೃಪೂರ್ಣ ಯೋಜನೆ ಬಗ್ಗೆಯೂ ಪರಿಶೀಲಿಸಿ ಸೌಲಭ್ಯಗಳು ತಲುಪುವಂತೆ ನೋಡಿಕೊಳ್ಳಬೇಕು ಎಂದರು.

ಸಾರ್ವಜನಿಕರ ಕುಂದುಕೊರತೆ, ಅಹವಾಲುಗಳನ್ನು ಆಲಿಸಿ ತ್ವರಿತವಾಗಿ ಪರಿಹರಿಸಬೇಕು. ಸ್ವೀಕರಿಸಲಾಗುವ ಪ್ರತಿ ಅರ್ಜಿಗೂ ಸೂಕ್ತ ಸ್ಪಂದನೆ ಸಿಗಬೇಕು. ಅಧಿಕಾರಿಗಳು ಅವರ ಹಂತದಲ್ಲಿ ಸಮಸ್ಯೆ ಪರಿಹರಿಸಲು ಸಾಧ್ಯವಾಗದಿದ್ದಲ್ಲಿ ಉನ್ನತ ಮಟ್ಟಕ್ಕೆ ಕಳುಹಿಸಿದಲ್ಲಿ ಪರಿಹಾರಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ. ಜನರ ಅಹವಾಲುಗಳನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸಬಾರದು ಎಂದು ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಅವರು, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸ್ವಚ್ಚ ಭಾರತ್ ಮಿಷನ್, ಗ್ರಾಮ ವಿಕಾಸ್ ಸೇರಿದಂತೆ ವಿವಿಧ ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಕುರಿತು ವಿವರ ನೀಡಿದರು.

ಸಭೆಯಲ್ಲಿ ರೇಷ್ಮೆ, ತೋಟಗಾರಿಕೆ, ಆರೋಗ್ಯ, ಸಾರ್ವಜನಿಕ ಶಿಕ್ಷಣ, ಕಂದಾಯ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ಸಮಾಜ ಕಲ್ಯಾಣ, ಅರಣ್ಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ವಿವಿಧ ನಿಗಮಗಳು ಅನುಷ್ಟಾನಗೊಳಿಸುತ್ತಿರುವ ಯೋಜನೆಗಳ ಪ್ರಗತಿಯನ್ನು ವ್ಯಾಪಕವಾಗಿ ಪರಿಶೀಲಿಸಲಾಯಿತು.ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ಉಪವಿಭಾಗಾಧಿಕಾರಿ ಬಿ.ಫೌಜಿಯಾ ತರನ್ನಮ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಗುಣಮಟ್ಟದ ಆಹಾರ, ಉತ್ತಮ ಕೊಠಡಿಗಳ ನಿರ್ವಹಣೆ ಬಗ್ಗೆ ನಿಗಾ ವಹಿಸುವುದು ಅಧಿಕಾರಿಗಳ ಹೊಣೆಗಾರಿಕೆಯಾಗಿದೆ. ಪರಿಶೀಲನೆ ವೇಳೆ ಕಂಡುಬರುವ ಲೋಪಗಳನ್ನು ಗಮನಿಸಿ ಸೌಲಭ್ಯವನ್ನು ಸುಧಾರಣೆಗೊಳಿಸಲು ಸೂಚಿಸಬೇಕು. ಹಿರಿಯ ಅಧಿಕಾರಿಗಳು ಹಾಸ್ಟ್ಟೆಲ್ ಸೌಲಭ್ಯಗಳನ್ನು ಗಮನಿಸಿ ಅಗತ್ಯ ನಿರ್ದೇಶನ ನೀಡಿದಾಗ ಗುಣಮಟ್ಟದ ಸೌಲಭ್ಯಗಳು ತಲುಪÀಲು ಅನುಕೂಲವಾಗುತ್ತದೆ – ರಾಜೇಂದ್ರಕುಮಾರ್ ಕಠಾರಿಯಾ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ