ರೈಲ್ವೆ ಹಳಿ ಪೆಂಡ್ರಾಲ್ ಕ್ಲಿಪ್ ಖದೀಮರ ಸೆರೆ

ಮೈಸೂರು: ರೈಲು ಹಳಿಗೆ ಅಳವಡಿಸಿದ್ದ ಪೆಂಡ್ರಾಲ್ ಕ್ಲಿಪ್ (ಇಆರ್‍ಸಿ ಕ್ಲಿಪ್)ಗಳನ್ನು ಕಳವು ಮಾಡಿದ್ದ ಮೂವರನ್ನು ರೈಲ್ವೆ ರಕ್ಷಣಾ ದಳದ ಪೊಲೀಸರು ಬಂಧಿಸಿದ್ದಾರೆ. ಫೆ.1ರಂದು ಬೆಂಗಳೂರು ಮಾರ್ಗವಾಗಿ ಚೆನ್ನೈಗೆ ತೆರಳುತ್ತಿದ್ದ ಕಾವೇರಿ ಎಕ್ಸ್‍ಪ್ರೆಸ್ ರೈಲು ಗಾಡಿಯನ್ನು ಮೈಸೂರಿನ ರಿಂಗ್ ರಸ್ತೆ ಸಮೀಪ ಕೆಂಪು ದೀಪ ತೋರಿಸಿ ನಿಲ್ಲಿಸಿದ ಟ್ರ್ಯಾಕ್ ಮ್ಯಾನ್ ರೈಲು ನಿಧಾನವಾಗಿ ಚಲಿಸಲು ಸೂಚಿಸಿದ ಹಿನ್ನೆಲೆಯಲ್ಲಿ ಸಂಭವಿಸಬಹುದಾದ ಭಾರೀ ರೈಲು ದುರಂತವನ್ನು ತಪ್ಪಿಸಿದ್ದಾರೆ.

ರೈಲು ಟ್ರ್ಯಾಕ್‍ಗೆ ಅಳವಡಿಸಿದ್ದ 74 ಕ್ಲಿಪ್‍ಗಳನ್ನು ಕಳವು ಮಾಡಿದ್ದ ಪಶ್ಚಿಮ ಬಂಗಾಳ ಮೂಲದ ಸಂಜಯ್ ಧ್ರುವರಾಜ್ ಅಲಿಯಾಸ್ ಪಿಂಟು (22), ಮೈಸೂ ರಿನ ಬಿಎಂಶ್ರಿ ನಗರದ ಲಕ್ಷ್ಮಣ್ (28) ಹಾಗೂ ಅಲೀಂ ನಗರದ ರಿಜ್ವಾನ್ ಪಾಷಾ(38) ಅವರನ್ನು ಬಂಧಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿದ್ದ ರೈಲ್ವೆ ರಕ್ಷಣಾ ದಳದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ಸ್‍ಪೆಕ್ಟರ್ ಶಿವರಾಜು, ಸಬ್‍ಇನ್ಸ್‍ಪೆಕ್ಟರ್ ಗೋವಿಂದರಾಜು, ಸಿಬ್ಬಂದಿಗಳಾದ ನಾಗರಾಜು, ಮಂಜುನಾಥ್, ರಮೇಶ್, ನಾಗೇಂದ್ರ, ಭಾಸ್ಕರ ಹಾಗೂ ಜಗದೀಶ ಅವರು ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.