ಮಡಿಕೇರಿ ಸುತ್ತಮುತ್ತ ಗುಡುಗು ಸಹಿತ ಮಳೆ

ಮಡಿಕೇರಿ:  ರಣ ಮಳೆಯ ಅವಾಂತರದಿಂದ ಕಂಗೆಟ್ಟಿದ್ದ ಕೊಡಗು ಜಿಲ್ಲೆ ಸಹಜ ಸ್ಥಿತಿಯತ್ತ ಹೊರಳುತ್ತಿರುವಾಗಲೇ ಮತ್ತೆ ಮಳೆಯ ಆರ್ಭಟ ಕಂಡು ಬಂದಿದೆ. ಮಂಗಳವಾರ ಮಧ್ಯಾಹ್ನದ ಬಳಿಕ ಮಡಿಕೇರಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಗುಡುಗು-ಸಿಡಿಲಿನೊಂದಿಗೆ ಭಾರೀ ಮಳೆ ಸುರಿದಿದೆ.

ಈಗಾಗಲೇ ಪ್ರಕೃತಿ ವಿಕೋಪದಿಂದ ಸಂತ್ರಸ್ಥರಾದವರ ಪಾಲಿಗೆ ಕೆಲಕಾಲ ಸುರುದ ಮಳೆ  ಮತ್ತೊಮ್ಮೆ ಭೀತಿ ಹುಟ್ಟಿಸಿತು. ನಗರ ಸೇರಿದಂತೆ ಬೆಟ್ಟ ತಪ್ಪಲ ಪ್ರದೇಶಗಳಲ್ಲಿ ವಾಸವಿದ್ದವರು ಮಳೆಯ ಆರ್ಭಟಕ್ಕೆ ನಲುಗಿದ್ದು, ಇರುವ ಮನೆಗಳನ್ನು ಕೂಡ ಕಳೆದುಕೊಳ್ಳುವ ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿಂದೆ ಬೆಟ್ಟ ಶ್ರೇಣಿಗಳು ಕುಸಿತಗೊಂಡ ಪ್ರದೇಶಗಳಲ್ಲಿ ಬಿರುಕುಗಳು ಮೂಡಿದ್ದು ಅವುಗಳು ಮಳೆಯಿಂದ ಮತ್ತೊಮ್ಮೆ ಕುಸಿದು ಬೀಳುವ ಲಕ್ಷಣಗಳು ಗೋಚರಿಸುತ್ತಿವೆ.

ಮಳೆ ಹಾನಿಯಿಂದ ಕುಸಿತಗೊಂಡ ರಸ್ತೆಗಳ ರಿಪೇರಿ, ಮಣ್ಣು ತೆರವುಗೊಳಿಸುವ ಕಾರ್ಯಗಳು ಭರದಿಂದ ಸಾಗಿದ್ದು, ಇದೀಗ ಸುರಿದ ಮಳೆಯಿಂದಾಗಿ ದುರಸ್ಥಿ ಕಾಮಗಾರಿಗಳಿಗೆ ಅಡ್ಡಿಯಾಯಿತು.