ಕೊಡಗಲ್ಲಿ ಮತ್ತೆ ಮಳೆ ಗಂಡಾಂತರ?

ಮಡಿಕೇರಿ: ಕೊಡಗು ಮತ್ತು ನೆರೆಯ ಕೇರಳ ರಾಜ್ಯದಲ್ಲಿ ಈ ವರ್ಷವೂ ಭಾರೀ ಮಳೆ ಸುರಿಯುವುದರೊಂದಿಗೆ ಕಳೆದ ಬಾರಿಯ ಪ್ರಕೃತಿ ವಿಕೋಪ ಮರು ಕಳಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ಭಾರತೀಯ ಭೂ ವೈಜ್ಞಾನಿಕ ಸಮೀಕ್ಷಾ ಸಂಸ್ಥೆಯ ಮಾಜಿ ಉಪ ಮಹಾ ನಿರ್ದೇಶಕ ಡಾ.ಹೆಚ್.ಎಸ್.ಎಂ.ಪ್ರಕಾಶ್ ಎಚ್ಚರಿಸಿದ್ದಾರೆ.

ಬೆಂಗಳೂರಿನಲ್ಲಿರುವ ಡಿಜಿವರ್ಡ್ ನ್ಯೂಸ್ ನೆಟ್‍ವರ್ಕ್‍ಗೆ ನೀಡಿರುವ ಸಂದರ್ಶನದಲ್ಲಿ ಜನರಲ್ಲಿನ ಪ್ರಕೃತಿ ವಿಕೋಪದ ಆತಂಕಗಳ ಕುರಿತು ಅವರು ವಿಶ್ಲೇಷಿಸಿದ್ದಾರೆ. ಹವಾಯ್ ಮತ್ತು ಮಾರಿಷಸ್‍ನ ಪೋರ್‍ಮೆಸಾ ದಲ್ಲಿನ ಜ್ವಾಲಾಮುಖಿ ಸ್ಫೋಟದಿಂದ ತೀವ್ರ ತರವಾದ ದಟ್ಟ ಮೋಡಗಳು ಆಕಾಶದಲ್ಲಿ ಕಟ್ಟುತ್ತವೆ. ಜ್ವಾಲಾಮುಖಿ ಸ್ಫೋಟಕ್ಕೂ ಮುನ್ನ ಏಳುವ ಮ್ಯಾಗ್ಮಾ ದ್ರಾವಣಯುಕ್ತ ಹೊಗೆ ಯೊಂದಿಗೆ ನೀರು ಆವಿಯಾಗಿ ಮೋಡ ಗಳು ರೂಪುಗೊಳ್ಳುತ್ತಿವೆ. ಈಗಾಗಲೇ ಈ ಮೋಡಗಳು ಭಾರತದ ಕಡೆ ಚಲಿ ಸಲು ಆರಂಭಿಸಿದ್ದು, ದಕ್ಷಿಣ ಒಳನಾಡಿನ ಕೇರಳ ಮತ್ತು ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಸುರಿಸುವ ಎಲ್ಲಾ ಲಕ್ಷಣಗಳೂ ಇವೆ ಎಂದು ಡಾ.ಪ್ರಕಾಶ್ ಹೇಳಿದ್ದಾರೆ.

ಕಳೆದ ವರ್ಷದಂತೆ ಈ ಬಾರಿಯೂ 10ರಿಂದ 15 ದಿನಗಳ ಅಂತರದಲ್ಲಿ ಕುಂಭ ದ್ರೋಣ ಮಳೆ 5 ಹಂತಗಳಲ್ಲಿ ತನ್ನ ಬಿರುಸು ತೋರುವ ಸಾಧ್ಯತೆಗಳು ಸದ್ಯದ ಹವಾಮಾನ ಬೆಳವಣಿಗೆಯಲ್ಲಿ ಕಂಡು ಬರುತ್ತಿದ್ದು, ಆಗಸ್ಟ್ ತಿಂಗಳಲ್ಲಿ ನದಿಗಳಲ್ಲಿ ಪ್ರವಾಹ ಪರಿಸ್ಥಿತಿಯೂ ನಿರ್ಮಾಣವಾ ಗುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ. ಮೊದಲು 3 ಹಂತಗಳಲ್ಲಿ ಸುರಿಯುವ ಮಳೆಯಿಂದ ಮಣ್ಣು ಸಂಪೂರ್ಣ ತೇವಗೊಳ್ಳಲಿದ್ದು, ನಂತರ ಬರುವ ಮಳೆಯ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯವನ್ನು ಮಣ್ಣು ಕಳೆದುಕೊಳ್ಳಲಿದೆ. ಬಳಿಕ ಭೂ ಕುಸಿತ, ಬೆಟ್ಟ ಜಾರುವ ಪರಿಸ್ಥಿತಿ ತಲೆದೋರಲಿವೆ ಎಂದು ಎಚ್ಚರಿಸಿದ್ದಾರೆ. ಈ ಬಾರಿ ಹವಾಮಾನದಲ್ಲೂ ಭಾರೀ ಬಿಸಿ ವಾತಾವರಣ ಕಂಡು ಬಂದಿದ್ದು, ಇದಕ್ಕೆ ಮಂಜು ಬೀಳದಿರುವುದೇ ಕಾರಣವಾಗಿದೆ. ಕಳೆದ ಬಾರಿಯೂ ಮಂಜು ಬೀಳದ ವಾತಾವರಣ ಇತ್ತು. ಮಂಜು ಬೀಳದಿದ್ದರೆ, ಮಣ್ಣಿನಲ್ಲಿ ತೇವಾಂಶವೆಲ್ಲಾ ಇಲ್ಲವಾಗಿದೆ ಎಂದೇ ಅರ್ಥವಾಗಿದ್ದು, ಇದು ಪ್ರಕೃತಿಯಲ್ಲಾಗುವ ವಿಕೋಪದ ಮುನ್ಸೂಚನೆಯೂ ಆಗಿದೆ ಎಂದು ಡಾ.ಹೆಚ್.ಎಸ್.ಎಂ.ಪ್ರಕಾಶ್ ಹೇಳಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಈ ಹಿಂದೆ ಪ್ರಕೃತಿ ವಿಕೋಪ ಘಟಿಸಿದ ಗ್ರಾಮಗಳ ಬೆಟ್ಟಶ್ರೇಣಿಗಳಲ್ಲಿ ಭಾರೀ ಬಿರುಕು ಮೂಡಿದ್ದು, ಈ ವರ್ಷದ ಮೊದಲ ಮಳೆಗೆ ಅವುಗಳು ಕುಸಿಯುವ ಎಲ್ಲಾ ಲಕ್ಷಣಗಳೂ ಕಂಡು ಬರುತ್ತಿವೆ. ನದಿಗಳಲ್ಲಿ ಭಾರೀ ಪ್ರಮಾಣದ ಹೂಳು, ಮಣ್ಣು ಕಲ್ಲುಗಳ ರಾಶಿ ತುಂಬಿದ್ದು, ಪ್ರವಾಹ ಪರಿಸ್ಥಿತಿ ತಲೆದೋರುವ ಎಲ್ಲಾ ಸಾಧ್ಯತೆಗಳು ಇವೆ ಎಂದು ತಿಳಿಸಿದ್ದಾರೆ.