ಆತ್ಮಹತ್ಯೆ ಮಹಾ ಪಾಪ…ನಕಾರಾತ್ಮಕ ಚಿಂತನೆ  ಸುಳಿದರೆ ಕೂಡಲೇ ಆಪ್ತರಲ್ಲಿ ಸಮಾಲೋಚಿಸಿ

ಮೈಸೂರು: ಯಾವುದೇ ಸಮಸ್ಯೆಗೆ ಆತ್ಮಹತ್ಯೆಯೇ ಪರಿಹಾರವಲ್ಲ… ಈಸಬೇಕು ಇದ್ದು ಜಯಿಸಬೇಕು… ಆತ್ಮ ಹತ್ಯೆ ಮಹಾಪಾಪ… ಆಪ್ತ ಸಮಾಲೋ ಚನೆ ಪಡೆಯಿರಿ, ಆತ್ಮಹತ್ಯೆ ತಡೆಯಿರಿ…

ಹೀಗೆ ಹತ್ತು ಹಲವು ಘೋಷಣೆಗಳು ಮೊಳಗುವ ಮೂಲಕ ಆತ್ಮಹತ್ಯೆ ತಡೆಗಟ್ಟುವ ಕುರಿತು ಜಾಗೃತಿ ಜಾಥಾ ನಡೆಸಲಾಯಿತು. ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಸಂಯುಕ್ತಾಶ್ರಯ ದಲ್ಲಿ ಗುರುವಾರ ಏರ್ಪಡಿಸಿದ್ದ ಜಾಥಾ ದಲ್ಲಿ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡು ಅಮೂಲ್ಯ ವಾದ ಬದುಕನ್ನು ಆತ್ಮಹತ್ಯೆಗೆ ದೂಡ ಬೇಡಿ ಎಂಬ ಸಂದೇಶ ಸಾರಿದರು.

`ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ’ ಅಂಗ ವಾಗಿ ಹಮ್ಮಿಕೊಂಡಿದ್ದ ಈ ಜಾಥಾಕ್ಕೆ ನಜರ್ ಬಾದಿನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿ ಚಾಲನೆ ನೀಡಲಾಯಿತು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಚಿದಂಬರ ಚಾಲನೆ ನೀಡಿ ಮಾತನಾಡಿ, ಇಡೀ ಪ್ರಪಂಚದಲ್ಲಿ ಆತ್ಮಹತ್ಯೆಗೆ ತಮ್ಮ ಬದುಕು ಬಲಿ ಕೊಡುವಲ್ಲಿ ಯುವ ಸಮುದಾಯವೇ ಹೆಚ್ಚಿನ ಪ್ರಮಾಣ ದಲ್ಲಿದೆ. ಜೊತೆಗೆ ಹಲವು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಆಗಿಲ್ಲ ಎಂಬುದು ಸೇರಿದಂತೆ ಕ್ಷುಲ್ಲಕ ಕಾರಣಗಳಿಗೆ ಆತ್ಮಹತ್ಯೆ ಹಾದಿ ಹಿಡಿಯುತ್ತಾರೆ. ಆತ್ಮಹತ್ಯೆಯೇ ಎಲ್ಲಾ ಸಮಸ್ಯೆಗೂ ಪರಿಹಾರವಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ಮಾನವ ಸಮುದಾಯದಲ್ಲಿ ಜನಿಸಿದ ಮೇಲೆ ಪ್ರತಿ ಯೊಬ್ಬರು ತಾನೂ ಬದುಕಿ, ಇತರರನ್ನು ಬದುಕಲು ಬಿಡುವ ಆದರ್ಶದೊಂದಿಗೆ ಜೀವನ ನಡೆಸಬೇಕು ಎಂದು ತಿಳಿಸಿದರು.

ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಗಳ ಕಚೇರಿ ವೃತ್ತ, ಚಾಮುಂಡಿ ವಿಹಾರ ಕ್ರೀಡಾಂಗಣ ರಸ್ತೆ, ಗೋಪಾಲಗೌಡ ಆಸ್ಪತ್ರೆ ವೃತ್ತ ಸೇರಿದಂತೆ ಇನ್ನಿತರ ರಸ್ತೆಗಳಲ್ಲಿ ಸಂಚ ರಿಸಿದ ಜಾಥಾವು ಮತ್ತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿ ಅಂತ್ಯಗೊಂಡಿತು.

ಕರಪತ್ರ ಹಂಚಿದರು: ಜಾಥಾದಲ್ಲಿ ಜಿಲ್ಲಾ ಪಂಚಾಯತ್ ಮತ್ತು ಆರೋಗ್ಯ ಇಲಾಖೆ ಯಿಂದ ಹೊರತಂದಿರುವ ಆತ್ಮಹತ್ಯೆ ತಡೆಗಟ್ಟುವ ಸಂಬಂಧದ ಕರಪತ್ರಗಳನ್ನು ಸಾರ್ವಜನಿಕರಿಗೆ ಹಂಚಲಾಯಿತು.

ಪ್ರಪಂಚದಾದ್ಯಂತ ಪ್ರತಿ ವರ್ಷ ಸುಮಾರು 8 ಲಕ್ಷ ಮಂದಿ ಆತ್ಮಹತ್ಯೆಗೆ ಶರಣಾಗುತ್ತಿ ದ್ದಾರೆ. ಈ ಪೈಕಿ ಭಾರತದಲ್ಲಿ ಆತ್ಮಹತ್ಯೆಯಿಂದ ಮೃತಪಡುವವರ ಪ್ರಮಾಣ ಶೇ.17ರಷ್ಟಿದೆ. ಅಂತಾರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವ ಸಂಘ (ಐಎಎಸ್‍ಪಿ) ಈ ವರ್ಷದ `ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ’ದ ಆಚರಣೆ ಯನ್ನು `ಎಲ್ಲರೂ ಜೊತೆಗೂಡಿ ಆತ್ಮಹತ್ಯೆ ತಡೆಗಟ್ಟೋಣ’ ಘೋಷ ವಾಕ್ಯದಡಿ ಆಚ ರಿಸಲು ಕರೆ ನೀಡಿದೆ. ಪ್ರಸ್ತುತ ದಿನಗಳಲ್ಲಿ ಆತ್ಮಹತ್ಯೆ ಹೆಚ್ಚಳಗೊಳ್ಳುವ ಮೂಲಕ ತೀವ್ರ ತರವಾದ ಸಾಮಾಜಿಕ ಪಿಡುಗಾಗಿ ಪರಿಣಮಿ ಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಜನಸಮುದಾಯ ದಲ್ಲಿ ಅರಿವು ಮೂಡಿಸಬೇಕು. ನಿಮ್ಮ ಪ್ರೀತಿ ಪಾತ್ರರೊಂದಿಗೆ ಮಾತನಾಡಿ ನಿಮ್ಮ ಸುತ್ತ ಮುತ್ತಲಿನ ಕಷ್ಟದಲ್ಲಿರುವವರ ಭಾವನೆಗಳಿಗೆ ಸ್ಪಂದಿಸಿ ಎಂಬಿತ್ಯಾದಿ ವಿಚಾರಗಳನ್ನು ಕರ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

104ಕ್ಕೆ ಕರೆ ಮಾಡಿ ಸಾಂತ್ವನ ಪಡೆಯಿರಿ: ಯಾವುದೇ ಕಾರಣಕ್ಕಾದರೂ ಆತ್ಮಹತ್ಯೆ ಆಲೋಚನೆ ಬಂದಾಗ ಒಂಟಿಯಾಗಿ ಇರ ಬಾರದು. ನಂಬಿಕಸ್ಥರಲ್ಲಿ ಅಂತರಾಳದ ನೋವು ಹೇಳಿಕೊಳ್ಳಬೇಕು. ಆದಾಗ್ಯೂ ಆತ್ಮಹತ್ಯೆ ಆಲೋಚನೆ ಉಂಟಾದರೆ ಅಂತಹವ ರನ್ನು ಮನೋರೋಗ ತಜ್ಞರಿಗೆ ಭೇಟಿ ಮಾಡಿಸಿ, ಆಪ್ತ ಸಮಾಲೋಚನೆ ಕೊಡಿಸಿ. ಯೋಗ, ಧ್ಯಾನ, ಸಂಗೀತ, ಕ್ರೀಡೆಯ ಅಭ್ಯಾಸ ಗಳನ್ನು ಬೆಳೆಸಿಕೊಂಡರೆ ನಕಾರಾತ್ಮಕ ಚಿಂತನೆ ಗಳು ದೂರವಾಗಿ ಆತ್ಮಹತ್ಯೆ ಆಲೋಚನೆ ಸುಳಿಯುವುದಿಲ್ಲ ಎಂಬಿತ್ಯಾದಿ ಸಲಹೆ ಗಳನ್ನು ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ. ಸಾಂತ್ವನ ಬಯಸಿದ್ದಲ್ಲಿ ಉಚಿತ ದೂರ ವಾಣಿ ಸಂಖ್ಯೆ `104’ಗೆ ಕರೆ ಮಾಡಿ, ದಿನದ 24 ಗಂಟೆಗಳಲ್ಲೂ ಮನಬಿಚ್ಚಿ ಮಾತನಾಡ ಬಹುದು. ಮಾನಸಿಕ ಆರೋಗ್ಯ ಚಿಕಿತ್ಸೆಯ ಔಷಧಗಳು ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯಲಿವೆ ಎಂಬ ಮಾಹಿತಿಯನ್ನು ಕರ ಪತ್ರದಲ್ಲಿ ಉಲ್ಲೇ ಖಿಸಲಾಗಿದೆ. ಮೈಸೂರು ಜಿಲ್ಲಾ ಮಾನ ಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ. ಎಂ.ಎಸ್.ಮಂಜುಪ್ರಸಾದ್, ಮನೋರೋಗ ತಜ್ಞ ಡಾ.ನರೇಂದ್ರ, ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನ ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿಗಳಾದ ನವೀನ್, ಮಧುಸೂದನ್, ದೊಡ್ಡಯ್ಯ ಸೇರಿದಂತೆ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಸಿಬ್ಬಂದಿ ಹಾಜರಿದ್ದರು.