ಮೈಸೂರು ವಿವಿಯಲ್ಲಿ ಶೀಘ್ರ ಬುದ್ಧ ಅಧ್ಯಯನ ಕೇಂದ್ರ

ಮೈಸೂರು, ನ.9(ಪಿಎಂ)- ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬುದ್ಧ ಅಧ್ಯಯನ ಕೇಂದ್ರ ಆರಂಭಿಸಲು ಶೀಘ್ರ ಕ್ರಮ ವಹಿಸ ಲಾಗುವುದು ಎಂದು ವಿಶ್ವ ವಿದ್ಯಾನಿಲ ಯದ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ಇಂದಿಲ್ಲಿ ಪ್ರಕಟಿಸಿದರು.

ಮೈಸೂರು ವಿವಿಯ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತ ರಣ ಕೇಂದ್ರ ಹಾಗೂ ಬೈಲುಕುಪ್ಪೆಯ 14ನೇ ಟಿಬೆಟಿಯನ್ ಕಾಲೇಜ್ ಸ್ಟೂಡೆಂಟ್ಸ್ ಕಾನ್ಫ ರೆನ್ಸ್ ಜಂಟಿ ಆಶ್ರಯದಲ್ಲಿ `ಯುವ ಮನಸ್ಸಿನ ನಡೆ… ಬುದ್ಧನೆಡೆಗೆ’ ಶೀರ್ಷಿಕೆಯಡಿ ಮಾನಸಗಂಗೋತ್ರಿಯ ವಿಜ್ಞಾನ ಭವನ ದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ರಾಜ್ಯ ಮಟ್ಟದ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿವಿಯ ಅಂಬೇಡ್ಕರ್ ಸಂಶೋಧನಾ ಕೇಂದ್ರದಲ್ಲಿ ಬುದ್ಧ ಅಧ್ಯಯನ ಕೇಂದ್ರ ಆರಂ ಭಿಸಲಾಗುವುದು. ಬಳಿಕ ಪ್ರತ್ಯೇಕ ಕಟ್ಟಡ ಸೇರಿದಂತೆ ಮೂಲ ಸೌಕರ್ಯಗಳನ್ನು ಹಂತ ಹಂತವಾಗಿ ಒದಗಿಸಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡಲಾಗು ವುದು ಎಂದು ತಿಳಿಸಿದರು.

ಮಾನವ ಕುಲದ ಎಲ್ಲ ತಲ್ಲಣಗಳಿಗೆ ಬುದ್ಧನ ಚಿಂತನೆಯಲ್ಲಿ ಪರಿಹಾರ ಕಾಣಲು ಸಾಧ್ಯವಿದೆ. ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇ ಖಿಸಿದೆ ಎಂದಾಗಲೀ ಇಲ್ಲವೇ ನಮ್ಮ ಸಂಪ್ರ ದಾಯ ಎಂದಾಗಲೀ ಯಾವುದನ್ನೂ ಕುರು ಡಾಗಿ ಸ್ವೀಕರಿಸಬಾರದು. ಬದಲಿಗೆ ಅದನ್ನು ಪರಾಮರ್ಶಿಸಿ ಸಮಾಜಕ್ಕೆ ಒಳಿತಾಗುವುದೇ ಎಂದು ಅವಲೋಕಿಸಬೇಕು. ಆ ಮೂಲಕ ಅದರ ವೈಚಾರಿಕ ನೆಲೆಯನ್ನು ವಿಮರ್ಶಿಸಿ ಒಪ್ಪಿಕೊಳ್ಳಬೇಕು ಎಂಬುದೇ ಬುದ್ಧನ ವಿಚಾರಧಾರೆ ಆಗಿದೆ ಎಂದು ವ್ಯಾಖ್ಯಾನಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ತಮ್ಮ `ಬುದ್ಧ ಅಂಡ್ ಇಸ್ ಧಮ್ಮ’ ಕೃತಿಯಲ್ಲಿ ಬುದ್ಧನ ಚಿಂತನೆಗಳ ಮಹತ್ವವನ್ನು ಅನಾ ವರಣಗೊಳಿಸಿದ್ದಾರೆ. ಬುದ್ಧ ಧಮ್ಮ ಜಗತ್ತಿನ ಶ್ರೇಷ್ಠ ಧರ್ಮ. ಶಾಂತಿ, ಅಹಿಂಸೆಯನ್ನು ಜಗತ್ತಿನಾದ್ಯಂತ ಬುದ್ಧ ಪ್ರಚುರಪಡಿಸಿದ. ಯುವ ಸಮೂಹ ಬುದ್ಧನೆಡೆಗೆ ಆಕರ್ಷಿತ ರಾಗುತ್ತಿದ್ದಾರೆ. ಬದುಕನ್ನು ಮುನ್ನಡೆಸಲು ಬುದ್ಧನ ಚಿಂತನೆಯಲ್ಲಿ ಸರಳ ಮಾರ್ಗ ಗಳಿವೆ. ಬುದ್ಧನ ಚಿಂತನೆಗಳ ಕುರಿತಂತೆ ನಿರಂತರ ಅಧ್ಯಯನಗಳು ನಡೆಯುವುದು ಅಗತ್ಯ. ದೇಶದಲ್ಲಿ ಶೇ.40ರಷ್ಟು ಯುವ ಸಮು ದಾಯವಿದ್ದು, ಅವರನ್ನು ಸನ್ಮಾರ್ಗದಲ್ಲಿ ನಡೆಸಲು ಇಂತಹ ಕಾರ್ಯಕ್ರಮಗಳು ಪೂರಕವಾಗಲಿವೆ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರಿನ ಮಹಾಬೋಧಿ ಸೊಸೈಟಿ ಪ್ರಧಾನ ಕಾರ್ಯದರ್ಶಿ ಆನಂದ್ ಬಂತೇಜಿ ಮಾತನಾಡಿ, ಬುದ್ಧನ ವಿಚಾರಗಳು ನಮ್ಮ ಬದುಕು ಮುನ್ನಡೆಸಲು ಸಹಕಾರಿ. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಸೇರಿದಂತೆ ಯಾವುದೇ ಧರ್ಮಿಯರು ಬೇಕಾದರೂ ಬುದ್ಧನ ಚಿಂತನೆಗಳನ್ನು ಅಳವಡಿಸಿಕೊಳ್ಳ ಬಹುದು. ಬದುಕುವ ಕಲೆಗೆ ಸಂಬಂಧಿ ಸಿದಂತೆ ಬುದ್ಧ ಅಸಂಖ್ಯಾತ ತಂತ್ರಗಳನ್ನು ನಮಗೆ ತಿಳಿಸಿಕೊಟ್ಟಿದ್ದಾನೆ ಎಂದರು.

ಬುದ್ಧನ ವಿಚಾರಗಳು ಮನಸ್ಸಿಗೆ ಚೈತನ್ಯ ವಾಗಬಲ್ಲವು. ಹೀಗೆ ಕೆಲ ವರ್ಷಗಳ ಹಿಂದೆ ನಮ್ಮ ಮಹಾಬೋಧಿ ಎದುರು ಹೋಗು ತ್ತಿದ್ದ ಯುವತಿಯೊಬ್ಬರು ನನ್ನನ್ನು ಭೇಟಿ ಮಾಡಿ ಸಮಾಲೋಚಿಸಿದರು. ಅವರು ಬುದ್ಧ ಚಿಂತನೆಗಳ ಬಗ್ಗೆ ತಿಳಿದುಕೊಂಡರು. ನಮ್ಮ ಸಂಸ್ಥೆಯಲ್ಲಿ ನಡೆಯುತ್ತಿದ್ದ ಧ್ಯಾನ ತರಬೇತಿ ಯಲ್ಲಿ ಭಾಗವಹಿಸುತ್ತಿದ್ದರು. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಚಿಂತಿಸಿದ್ದ ಆಕೆ ನಿಧಾನವಾಗಿ ಅದರಿಂದ ಹೊರ ಬಂದು ಬದುಕಿನಲ್ಲಿ ಭರವಸೆ ಕಂಡು ಕೊಂಡು ಈಗ ಯಶಸ್ವಿ ಜೀವನ ನಡೆಸು ತ್ತಿದ್ದಾರೆ ಎಂದು ತಿಳಿಸಿದರು.

ನಂತರ ನಡೆದ ಮೊದಲ ಗೋಷ್ಠಿ ಯಲ್ಲಿ `ಸಿದ್ಧಾರ್ಥ ಹೇಗೆ ಬುದ್ಧನಾದ’ ಕುರಿತಂತೆ ಚಿಂತಕ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ವಿಷಯ ಮಂಡಿಸಿದರು. ಬಳಿಕ ವಿವಿಧ ವಿಷಯಗಳ ಬಗ್ಗೆ ಗೋಷ್ಠಿಗಳು ನಡೆದವು. ಭಾನುವಾರವೂ 2 ಗೋಷ್ಠಿ ಗಳು ನಡೆಯಲಿದ್ದು, ಸಂಜೆ 4ಕ್ಕೆ ಸಮಾ ರೋಪ ಸಮಾರಂಭ ನಡೆಯಲಿದೆ.

ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಅಂಬೇಡ್ಕರ್ ಅಧ್ಯಯನ ಕೇಂದ್ರಗಳ ಮುಖ್ಯಸ್ಥರು, ಸಂಶೋಧನಾ ವಿದ್ಯಾರ್ಥಿ ಗಳು ಸೇರಿದಂತೆ ವಿದ್ಯಾರ್ಥಿಗಳು ಸಮ್ಮೇ ಳನದಲ್ಲಿ ಪಾಲ್ಗೊಂಡಿದ್ದಾರೆ. ಬೈಲ ಕುಪ್ಪೆಯ ಸೆರಾಜೆ ಮೊನಾಸ್ಟಿಕ್ ವಿಶ್ವವಿದ್ಯಾ ನಿಲಯದ ಭಂತೆ ಸೋನಮ್ ವಾಂಗ್ ಡೆನ್ ದಿಕ್ಸೂಚಿ ಭಾಷಣ ಮಾಡಿದರು.

ಮುಕ್ತ ವಿವಿ ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ಅಧ್ಯಕ್ಷತೆ ವಹಿಸಿದ್ದರು. 14ನೇ ಟಿಬೆಟಿಯನ್ ಕಾಲೇಜ್ ಸ್ಟೂಡೆಂಟ್ಸ್ ಕಾನ್ಫರೆನ್ಸ್‍ನ ಅಧ್ಯಕ್ಷ ಭಂತೆ ಸೋನಂ ಪುನ್‍ಸಾಕ್, ಮೈಸೂರು ವಿವಿ ಅಂಬೇ ಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮಶೇಖರ್, ಸಂದರ್ಶಕ ಪ್ರಾಧ್ಯಾಪಕ ಬಸವರಾಜ ದೇವನೂರ, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಎಸ್.ನರೇಂದ್ರಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.