ದಾಖಲೆ ನೀಡಿ ಸೌಲಭ್ಯ ಸದ್ಬಳಕೆಗೆ ಸಲಹೆ: ಕಣ್ಣೂರು ಗ್ರಾಮ ಸಭೆಯಲ್ಲಿ ಪಡಿತರ ಅಕ್ಕಿ, ಅಂಗನವಾಡಿ ಸಮಸ್ಯೆ ಪರಿಹಾರಕ್ಕೆ ಒತ್ತಾಯ

ಕಾಮಗೆರೆ: ‘ವಸತಿ ನಿವೇಶನ ಇಲ್ಲದಿರುವ ಅರ್ಹ ಫಲಾನುಭವಿಗಳು ಗ್ರಾಮ ಪಂಚಾಯಿತಿಗೆ ಅಗತ್ಯವಾದ ದಾಖಲೆ ಸಲ್ಲಿಸಿ, ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹದೇವ ತಿಳಿಸಿದರು.

ಸಮೀಪದ ಕಣ್ಣೂರು ಗ್ರಾಮ ಪಂಚಾಯಿತಿಯಲ್ಲಿ ನಡೆದ 2018-19ನೇ ಸಾಲಿನ ವಸತಿ, ನಿವೇಶನ ರಹಿತರ ಅರ್ಹ ಫಲಾನುಭವಿಗಳ ಆಯ್ಕೆ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು.

ಮನೆ ನಿರ್ಮಾಣಕ್ಕಾಗಿ ಸರ್ಕಾರ ಅನುದಾನ ಬಿಡುಗಡೆಗೊಳಿಸಿದೆ. ಅರ್ಹ ಫಲಾನುಭವಿಗಳು ಸೂಕ್ತ ದಾಖಲೆ ನೀಡಿ ಮನೆ ನಿರ್ಮಿಸಿಕೊಳ್ಳಬೇಕು. ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಇಲಾಖೆಯಿಂದ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರ ಬಗ್ಗೆ ಮಾಹಿತಿ ಪಡೆದು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾರಾಯಣಚಾರಿ ಮಾತನಾಡಿ, ಪ್ರಧಾನ ಮಂತ್ರಿ ಯೋಜನೆ ಹಾಗೂ ವಿವಿಧ ಯೋಜನೆಯಡಿ ವಸತಿ, ನಿವೇಶನ ನೀಡಲಾಗುತ್ತಿದೆ. ಸಂಬಂಧಪಟ್ಟ ಅರ್ಹ ಫಲಾನುಭವಿಗಳು ಅರ್ಜಿಯನ್ನು ಸಲ್ಲಿಸಬಹುದು. ನಂತರ ಅರ್ಜಿಗಳನ್ನು ಪರಿಶೀಲಿಸಿ ಸೌಲಭ್ಯ ನೀಡಲಾಗುತ್ತದೆ. ಈಗಾಗಲೇ ಕಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಾಲಿಂಗನ ಹಳ್ಳಿ, ಜಿ.ಕೆ.ಹೊಸೂರು, ಶಿವಪುರ ಗ್ರಾಮಗಳಿಂದ ಒಟ್ಟು 879ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ವಿವರಿಸಿದರು.

ಕಣ್ಣೂರು ಗ್ರಾಮದಲ್ಲಿ ಪಡಿತರ ಅಕ್ಕಿ ವಿತರಣೆಯಾಗಿಲ್ಲ: ಗ್ರಾಮದ ನ್ಯಾಯ ಬೆಲೆ ಅಂಗಡಿಯಲ್ಲಿ ಮೂರು ತಿಂಗಳಿಂದ ಅಕ್ಕಿ ವಿತರಣೆ ಮಾಡದೆ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಗ್ರಾಮದ ಶ್ರೀಕಂಠ ಅವರು ಸಭೆಯಲ್ಲಿ ದೂರಿದರು.

ಸರ್ಕಾರ ಬಡವರಿಗಾಗಿ ಪಡಿತರ ಅಕ್ಕಿ ನೀಡುತ್ತಿದೆ. ಆದರೆ, ಪಡಿತರವನ್ನು ಪಕ್ಕದ ಮಂಗಲ ಗ್ರಾಮಕ್ಕೆ ವಿತರಣೆ ಮಾಡಲಾಗುತ್ತಿದೆ. ನಮ್ಮ ಗ್ರಾಮಕ್ಕೆ ನೀಡುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂಬಂಧ ನೋಡಲ್ ಅಧಿಕಾರಿ ಹಾಗೂ ಪಿಡಿಓ ಅವರು ಕೊಳ್ಳೇಗಾಲ ಆಹಾರ ಇಲಾಖಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಅಕ್ಕಿ ವಿತರಣೆ ಮಾಡುವಂತೆ ತಿಳಿಸಿದರು. ಇನ್ನೆರಡು ದಿನಗಳಲ್ಲಿ ಪಡಿತರ ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.

ಅಂಗನವಾಡಿ ಕೇಂದ್ರಕ್ಕೆ ಸೌಲಭ್ಯ ಕಲ್ಪಿಸಿ: ಕಣ್ಣೂರು ಗ್ರಾಮದ ಒಂದನೇ ಅಂಗನವಾಡಿ ಕೇಂದ್ರಲ್ಲಿ ಶೌಚಾಲಯ ಶಿಥಿಲಗೊಂಡಿದ್ದು, ಕುಸಿದು ಬೀಳುವ ಹಂತ ತಲುಪಿದೆ. ಇದರಿಂದ ತೊಂದರೆ ಸಂಭವಿಸುವ ಮುನ್ನವೇ ಅಧಿಕಾರಿಗಳು ಎಚ್ಚೇತು ಕ್ರಮ ಕೂಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಮಳೆ ಬಂದಾಗ ಕಲುಷಿತ ನೀರು ಅಂಗನವಾಡಿ ಕೇಂದ್ರದ ನೀರಿನ ತೊಟ್ಟಿಯಲ್ಲಿ ಸೇರುತ್ತಿದೆ. ಈ ನೀರನ್ನೇ ಅಡುಗೆ ಹಾಗೂ ಕುಡಿಯಲು ಬಳಸಲಾಗುತ್ತದೆ. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಹಲವು ಬಾರಿ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಅಧಿಕಾರಿಗಳು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಅಂಗನವಾಡಿ ಕಾರ್ಯಕರ್ತೆ ಇಂದ್ರಮ್ಮ ಮನವಿ ಮಾಡಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶ್ರೀಕಂಠಸ್ವಾಮಿ, ಉಪಾಧ್ಯಕ್ಷ ಮಹೇಶ್, ಸದಸ್ಯರು ಮಹೇಂದ್ರಗುರು, ತಮ್ಮಯಪ್ಪ, ಶಿಲ್ಪ, ಚಂದ್ರಮ್ಮ, ಬಸವರಾಜಮ್ಮ, ಅಫ್ರಾಜ್ ಖಾನ್, ಚಿಕ್ಕಣ್ಣ, ಗ್ರಾಮಸ್ಥರು ಇದ್ದರು.