ಮೈಸೂರಲ್ಲಿ ನೇಮಕಾತಿ ಅಭಿಯಾನ

ಮೈಸೂರು, ಮೇ 16(ಆರ್‍ಕೆ)- ನೇಮಕಾತಿ ಅಭಿಯಾನದಡಿ ದೇಶಾದ್ಯಂತ 71,000 ಯುವಜನ ರಿಗೆ ಏಕಕಾಲದಲ್ಲಿ ಸರ್ಕಾರಿ ನೌಕರಿ ನೇಮ ಕಾತಿ ಆದೇಶ ಪತ್ರವನ್ನು ವಿತರಿಸಲಾಯಿತು.

ಕೇಂದ್ರ ಸರ್ಕಾರದ ಅಂಚೆ ಇಲಾಖೆ, ಭಾರತೀಯ ರೈಲ್ವೆ ಇಲಾಖೆ, ಗೃಹ ಇಲಾಖೆ, ಕಾರ್ಮಿಕ ಮತ್ತು ಸಬಲೀಕರಣ ಸೇರಿದಂತೆ ಹಲವು ಇಲಾಖೆಗಳಲ್ಲಿ ಖಾಲಿ ಇದ್ದ ವಿವಿಧ ಹುದ್ದೆಗಳಿಗೆ ನಿಯಮಾನುಸಾರ ಪ್ರಕ್ರಿಯೆ ನಡೆಸಿ ಮೆರಿಟ್ ಆಧಾರದಲ್ಲಿ ನೇಮಕಾತಿ ಮಾಡಲಾ ಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೇಮಕಾತಿ ಆದೇಶ ಪ್ರತಿಗಳನ್ನು ಸಾಂಕೇತಿಕವಾಗಿ ವಿತರಿಸಿದರು.

ನೇಮಕಾತಿ ಅಭಿಯಾನದಡಿ ಮೈಸೂರಿನ ಮಾನಸಗಂಗೋತ್ರಿಯ ನಾಲೆಡ್ಜ್ ಪಾರ್ಕ್ ಸಭಾಂಗಣದಲ್ಲಿ ಅಂಚೆ ಇಲಾಖೆ ಆಯೋಜಿ ಸಿದ್ದ 5ನೇ ಉದ್ಯೋಗ ಮೇಳದ ರಾಷ್ಟ್ರೀಯ ಸಮಾರಂಭದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಮೈಸೂರು ಭಾಗದ 28 ಮಂದಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ಸಾಂಕೇತಿಕ ವಾಗಿ ವಿತರಿಸಿದರು. ಈ ಸಂದರ್ಭ ಮಾತನಾ ಡಿದ ಸಚಿವರು, ಮುಂದಿನ 25 ವರ್ಷದಲ್ಲಿ ಸ್ವಾತಂತ್ರ್ಯ ಶತಮಾನೋತ್ಸವದ ವೇಳೆಗೆ ಭಾರತ ವನ್ನು ವಿಶ್ವದ ಪ್ರಥಮ ಸ್ಥಾನಕ್ಕೇರಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ನಾವೆಲ್ಲರೂ ನನಸು ಮಾಡಬೇಕಿದೆ. ಉದ್ಯೋಗ ಸೃಷ್ಟಿ ಬಗ್ಗೆ ಬೇರೆ ಬೇರೆಯವರು ನಾನಾ ರೀತಿ ಮಾತನಾಡುತ್ತಿದ್ದರಿಂದ ಉದ್ಯೋಗ ಮೇಳದ ಮೂಲಕ ಸೇವಾ ನೇಮಕಾತಿ ಆದೇಶ ಪತ್ರ ವಿತರಸಲು ನಿರ್ಧರಿಸಲಾಗಿದೆ ಎಂದರು. ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ಬಳಿಕ 9 ವರ್ಷಗಳಲ್ಲಿ ಒಟ್ಟು 3,59,000 ಯುವಕ-ಯುವತಿಯರಿಗೆ ಮೆರಿಟ್ ಆಧಾರದಲ್ಲಿ ನೇಮಕಾತಿ ಆದೇಶ ಪತ್ರ ನೀಡಲಾಗಿದೆ. ಇದೀಗ ದೇಶದಾ ದ್ಯಂತ 71,000 ಮಂದಿಯನ್ನು ಕೇಂದ್ರ ಸರ್ಕಾ ರದ ವಿವಿಧ ಇಲಾಖೆಗಳಿಗೆ ನೇಮಕ ಮಾಡಿ ಕೊಳ್ಳಲಾಗಿದೆ ಎಂದು ತಿಳಿಸಿದರು.

ನೇಮಕಗೊಂಡಿರುವ ಪ್ರತಿಯೊಬ್ಬರೂ ತಮ್ಮ ಇಲಾಖೆಗಳಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸ ಬೇಕು. ಸರ್ಕಾರದ ಘನತೆ, ಗೌರವವನ್ನು ಹೆಚ್ಚಿಸು ವಂತೆ ಕೆಲಸ ಮಾಡಿ ಪ್ರಧಾನಿಗಳ ಪ್ರಗತಿ ಹೆಜ್ಜೆಗೆ ಹೆಜ್ಜೆ ಹಾಕಬೇಕು ಎಂದೂ ಶೋಭ ಕರೆ ನೀಡಿದರು. ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಈ ಹಿಂದೆ ಗಂಡು ಮಕ್ಕಳಾದರೆ ಅವರಿಗೆ ಆಸ್ತಿ ಸಂಪಾದಿಸಿಡಬೇಕೆಂದು ಹಾತೊರೆಯುತ್ತಿದ್ದ ಪೋಷಕರು, ಹೆಣ್ಣು ಮಕ್ಕಳಾದರೆ ಅವರ ಮದುವೆಗೆ ಹಣ ಹೊಂದಿಸುವಲ್ಲಿ ನಿರತರಾಗುತ್ತಿದ್ದರು. ಆದರೆ, ಈಗ ಗಂಡಾಗಲೀ, ಹೆಣ್ಣಾಗಲೀ ಅವರ ಶಿಕ್ಷಣದ ಮೇಲೆ ಹೆಚ್ಚು ಹಣ ತೊಡಗಿಸಿ ಉತ್ತಮ ಶಿಕ್ಷಣ ಕೊಡಿಸುತ್ತಾರೆ. ಅಂದರೆ ಶಿಕ್ಷಣದಿಂದ ಯಾವುದೇ ಶಿಫಾರಸ್ಸು, ಹಣ ಇಲ್ಲದೆಯೇ ಸರ್ಕಾರಿ ಉದ್ಯೋಗ ಪಡೆದುಕೊಳ್ಳಬಹುದೆಂಬ ವಿಶ್ವಾಸ ಜನಸಾಮಾನ್ಯರಲ್ಲಿ ಬಂದಿದೆ ಎಂದು ನುಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ದೇಶವನ್ನು ಆರ್ಥಿಕವಾಗಿ ಅಭಿವೃದ್ಧಿಗೊಳಿಸಲು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ದೇಶದ ಯುವ ಸಮೂಹಕ್ಕೆ ಉದ್ಯೋಗ ಸೃಷ್ಟಿಸುತ್ತಿರುವುದರಿಂದ ಸ್ಟಾರ್ಟ್ ಅಪ್‍ಗಳಿಗೆ ಅವಕಾಶ ಲಭ್ಯವಾಗಿದೆ ಎಂದು ಅವರು ನುಡಿದರು. ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪ ಅಗರವಾಲ್, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿರ್ದೇಶಕಿ ಡಾ. ಪುಷ್ಪಾವತಿ, ದಕ್ಷಿಣ ಕರ್ನಾಟಕ ಅಂಚೆ ಸೇವೆಗಳ ನಿರ್ದೇಶಕ ಟಿ.ಎಸ್. ಅಶ್ವಥ್‍ನಾರಾಯಣ, ಅಂಚೆ ಇಲಾಖೆ ಹಿರಿಯ ಅಧಿಕಾರಿಇ ಏಂಜೆಲ್‍ರಾಜ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಹೊಸದಾಗಿ ನೇಮಕಗೊಂಡಿರುವ 28 ಮಂದಿಯೊಂದಿಗೆ ನೆರೆದವರೆಲ್ಲರೂ ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ 71,000 ಮಂದಿ ನವ ಉದ್ಯೋಗಿಗಳನ್ನು ಉದ್ದೇಶಿಸಿ ಮಾಡಿದ ಭಾಷಣವನ್ನು ವೀಕ್ಷಿಸಿದರು.