ಚಾಮರಾಜನಗರ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 87 ಶಾಲೆಗಳ 198 ಕೊಠಡಿಗಳ ದುರಸ್ತಿ ಗಾಗಿ 1.71 ಕೋಟಿ ಹಾಗೂ ಶಾಲಾ ಕೊಠಡಿಗಳ ಮರು ನಿರ್ಮಾಣಕ್ಕಾಗಿ 6.19 ಕೋಟಿ ಒಟ್ಟು 7.90 ಕೋಟಿ ರೂ.ಗಳನ್ನು ಸರ್ಕಾರ ಮಂಜೂರು ಮಾಡಿದೆ ಎಂದು ಶಾಸಕ ಎನ್. ಮಹೇಶ್ ಹೇಳಿದರು.
ತಾಲೂಕಿನ ಕಣ್ಣೇಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಅವರು ಮಾತನಾಡಿದರು. ಕೊಳ್ಳೇಗಾಲ ಕ್ಷೇತ್ರಕ್ಕೆ ಸರ್ಕಾರ ಶಿಕ್ಷಣ ಇಲಾಖೆ ಮೂಲಕ 7.90 ಕೋಟಿ ರೂ. ನೀಡಿ ಇತಿಹಾಸ ನಿರ್ಮಿಸಿದೆ ಎಂದರು. ಗ್ರಾಮೀಣ ರಸ್ತೆಗಳ ಅಭಿವೃದ್ದಿಗಾಗಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ 25 ಕೋಟಿ ರೂ. ನೀಡುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದ್ದೇನೆ ಎಂದರು. ಕಣ್ಣೇಗಾಲ ಗ್ರಾಮಸ್ಥರು ಬೇಡಿಕೆಯಾದ ಮಂಗಲಹೊಸೂರು- ಕಣ್ಣೇಗಾಲ ಮುಖ್ಯರಸ್ತೆ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಭಿವೃದ್ಧಿಗೆ ಕ್ರಮಕೈಗೊಳ್ಳುತ್ತೇನೆ ಅಲ್ಲದೆ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಜತೆಯಲ್ಲಿ ಮಾತನಾಡಿ ಸುವರ್ಣಾವತಿ ಹೊಳೆಗೆ ನೀರಿಹರಿಸಲು ಒತ್ತು ನೀಡಲಾಗುವುದು. ಆದ್ಯತಾ ಮೇರೆಗೆ ಗ್ರಾಮವನ್ನು ಹಂತಹಂತವಾಗಿ ಅಭಿವೃದ್ದಿಪಡಿಸಲಾಗುವುದು ಎಂದರು.
ಬಿಎಸ್‍ಪಿ ಮಾಜಿ ಜಿಲ್ಲಾ ಉಪಾಧ್ಯಕ್ಷ ಎಂ.ಮಹದೇವ ನಾಯಕ ಮಾತನಾಡಿ, ಗ್ರಾಮದಲ್ಲಿ ಗೋಮಾಳದಲ್ಲಿ ಗ್ರಾಮಸ್ಥರಿಗೆ ಮನೆ ನಿರ್ಮಾಣ ಮಾಡಿಕೊಡಬೇಕು. ತಗಡೂರು ರಾಮಚಂದ್ರ ನಾಲೆಯಿಂದ ಅಂತರ್ಜಲ ಅಭಿವೃದ್ದಿಗಾಗಿ ಏತನೀರಾವರಿ ಮೂಲಕ ಗ್ರಾಮಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿಕೊಡಬೇಕು. ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನರ್ಸ್ ನೇಮಕ ಮಾಡಬೇಕು. ಕಣ್ಣೇಗಾಲ ಕೆರೆಗೆ ನೀರು ತುಂಬಿಸಬೇಕು. ಸೌಭಾಗ್ಯ ಯೋಜನೆಯಡಿ ಗ್ರಾಮದ ಬಡ ಕುಟುಂಬಗಳಿಗೆ ವಿದ್ಯುತ್ ಸೌಕರ್ಯ ಕಲ್ಪಿಸಿಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು. ಸಮಾರಂಭದಲ್ಲಿ ಗ್ರಾ.ಪಂ.ಅಧ್ಯಕ್ಷ ಗುರುಸಿದ್ದಪ್ಪ, ಸದಸ್ಯ ಆರ್.ಮಾದೇಶ್, ಸವಿತಾ, ಜಯಶಂಕರ್, ಮಣಿ, ಮಾಜಿ ಸದಸ್ಯ ಕೃಷ್ಣನಾಯಕ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರೇವಣ್ಣ, ಬಿಎಸ್ಪಿ ಮಾಜಿ ಜಿಲ್ಲಾಧ್ಯಕ್ಷ ಬಾಗಳಿ ರೇವಣ್ಣ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮಹದೇವಯ್ಯ ಹಾಗೂ ಮುಖಂಡರುಗಳು ಇತರರು ಹಾಜರಿದ್ದರು.