ಮೈಸೂರು: ಮೈಸೂರಿನ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೋರೇಷನ್ ಲಿಮಿಟೆಡ್ ಶಾಖೆಯ ಅಧಿಕಾರಿ, ಸಿಬ್ಬಂದಿ ಕಿರುಕುಳದಿಂದ ಬೇಸತ್ತಿರುವ ಹುಣಸೂರು ತಾಲೂಕಿನ ಮನುಗನಹಳ್ಳಿ ಗ್ರಾಮದ ಹೆಚ್.ಶೇಖರ್ ಮತ್ತು ಅವರ ಕುಟುಂಬ ದಯಾಮರಣ ಕ್ಕಾಗಿ ಅನುಮತಿ ಕೋರಿ ರಾಷ್ಟ್ರಪತಿಗಳಿಗೆ ಮನವಿ ಮಾಡಿದೆ. ರಾಷ್ಟ್ರಪತಿಗಳಿಗೆ ಈ ಸಂಬಂಧ ಬರೆದ ಮನವಿಯನ್ನು ಸೋಮವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದರು.
ಹುಣಸೂರು ತಾಲೂಕು ಬಿಳಿಕೆರೆ ಹೋಬಳಿ ಮನುಗನಹಳ್ಳಿಯ ಹೆಚ್. ಶೇಖರ್ ತಮ್ಮ ನಿವೇಶನದಲ್ಲಿ ಮನೆ ನಿರ್ಮಿಸಿಕೊಳ್ಳಲು ಮೈಸೂರಿನ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೋರೇಷನ್ ಮೈಸೂರು ಶಾಖೆಯಲ್ಲಿ ನಿವೇಶನದ ಮೇಲೆ 22,80,221 ರೂ. ಸಾಲ ಪಡೆದಿ ದ್ದರು. ಶೇಖರ್ ಅವರು ತಮ್ಮ ಪತ್ನಿ, ಮಾನಸಿಕ ಕಾಯಿಲೆಯಿಂದ ಬಳಲುತ್ತಿ ರುವ ಮಗಳು ಮತ್ತು 15-20 ಜನ ಕೆಲಸಕ್ಕೆ ಇಟ್ಟುಕೊಂಡು ಸ್ವಂತ ಸಣ್ಣ ಉದ್ಯೋಗ ಕೈಗೊಂಡಿದ್ದರು. ಪ್ರತಿದಿನ ವ್ಯಾಪಾರ ವಹಿವಾಟು ಉತ್ತಮವಾಗಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಬ್ಯಾಂಕ್‍ಗೆ ನಿಗದಿತ ಅವಧಿಯೊಳಗೆ ಕಂತುಗಳನ್ನು ಕಟ್ಟುತ್ತಾ ಬಂದಿದ್ದರು. ಆದರೆ ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣ ದಿಂದಾಗಿ ವ್ಯಾಪಾರ ವಹಿವಾಟಿನಲ್ಲಿ 4 ಕೋಟಿಯಷ್ಟು ಹಣ ಕಳೆದುಕೊಂಡರು. ಅಂದಿನಿಂದ ಫೈನಾನ್ಸ್ ಸಾಲ ತೀರಿಸಲು ಪರದಾಡುತ್ತಾ ಬಂದರು. ಆರ್ಥಿಕ ಸಂಕಷ್ಟದಿಂದಾಗಿ ಒಮ್ಮೆ ಇಡೀ ಕುಟುಂಬ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಗೆ ಸೇರಿ 1.50 ಲಕ್ಷ ರೂ.ಗಳಷ್ಟು ಹಣವನ್ನು ಸಾಲ ಮಾಡಿ ಕಟ್ಟಿದ್ದಾಗಿ ಶೇಖರ್ ರಾಷ್ಟ್ರಪತಿ ಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಆಸ್ಪತ್ರೆಯಿಂದ ಗುಣಮುಖರಾಗಿ ಬಂದ ನಂತರ ಆರ್ಥಿಕ ಸಂಕಷ್ಟದಿಂದ ಬೇರೆ ದಾರಿಯಿಲ್ಲದೇ ಆತ್ಮಹತ್ಯೆ ಬಗ್ಗೆ ಚಿಂತಿಸಿದ್ದೆವು. ಬಳಿಕ ಕಳೆದ ವಾರ ಮತ್ತೆ ಫೈನಾನ್ಸ್ ಸಿಬ್ಬಂದಿ ಮನೆಗೆ ಬಂದು ಬಾಯಿಗೆ ಬಂದಂತೆ ಅವಾಚ್ಯವಾಗಿ ನಿಂದಿಸಿ ದ್ದಲ್ಲದೆ, ಜೈಲಿಗೆ ಕಳಿಸುವ ಬೆದರಿಕೆ ಒಡ್ಡಿದರು. ಮನೆಯನ್ನು ಹರಾಜು ಹಾಕಿ ಹಣವನ್ನು ಫೈನಾನ್ಸ್‍ಗೆ ಜಮಾ ಮಾಡಿ ಕೊಳ್ಳುವುದಾಗಿ ಬೆದರಿಕೆ ಒಡ್ಡಿದರು. ಇದಕ್ಕೆ ಹೆದರಿ ನಾನು ಸ್ನೇಹಿತರ ಬಳಿ 1,70,000 ರೂ. ಪಡೆದು ಹಣ ಕಟ್ಟಲು ಹೋಗಿ, ಉಳಿದ ಕಂತಿನ ಹಣವನ್ನು ಮೂರು ತಿಂಗಳೊಳಗೆ ಕಟ್ಟುವುದಾಗಿ ಪರಿಪರಿಯಾಗಿ ಬೇಡಿಕೊಂಡರು ಲೆಕ್ಕಿಸದ ಅಧಿಕಾರಿ, ಸಿಬ್ಬಂದಿ ಹಣವನ್ನು ಕಟ್ಟಿಸಿಕೊಳ್ಳದೆ ಬ್ಯಾಂಕ್‍ನಿಂದ ಹೊರದಬ್ಬಿ ದರು. ಹೀಗೇನಾದರೂ ಆದರೆ ಮುಂದೆ ನಮ್ಮ ಕುಟುಂಬ ಬೀದಿ ಪಾಲಾಗುವ ಭಯದಿಂದ ಅವಮಾನ ತಾಳಲಾರದೆ ಕುಟುಂಬ ಸಮೇತ ಆತ್ಮಹತ್ಯೆಗೆ ನಿರ್ಧರಿಸಿ ದ್ದೇವೆ. ದಯಾಮಾರಣಕ್ಕೆ ಅನುಮತಿ ನೀಡುವಂತೆ ರಾಷ್ಟ್ರಪತಿಗಳಲ್ಲಿ ಮನವಿ ಮಾಡಿರುವುದಾಗಿ ನೊಂದ ಕುಟುಂಬದ ಹೆಚ್.ಶೇಖರ್ ತಿಳಿಸಿದ್ದಾರೆ.