ಸಹಕಾರಿ ಬ್ಯಾಂಕ್‍ನ 11 ಕೋಟಿ ರೂ. ಸಾಲ ಮನ್ನಾ

ಚಾಮರಾಜನಗರ: ರಾಜ್ಯ ಸರ್ಕಾರದ ರೈತರ ಸುಸ್ತಿ ಮನ್ನಾ ಘೋಷಣೆಯಿಂದ ಜಿಲ್ಲೆಯ ಸಹಕಾರಿ ಬ್ಯಾಂಕ್ (ಎಂಡಿಸಿಸಿ)ನ ಒಟ್ಟು ಸಾಲದ ಪೈಕಿ 11 ಕೋಟಿ ರೂ. ಮನ್ನಾ ಆಗಲಿದೆ.

ಇಂದಿಲ್ಲಿ ನಡೆದ ಜೆಪಂ ಕೆಡಿಪಿ ಸಭೆಯಲ್ಲಿ ಬ್ಯಾಂಕ್ ಅಧಿಕಾರಿ ಯೊಬ್ಬರು ಸಭೆಗೆ ಈ ಮಾಹಿತಿ ನೀಡಿದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಜೆಟ್ ಮಂಡಿಸುವಾಗ ರೈತರ ಸುಸ್ತಿ ಸಾಲಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಇದರ ಅನ್ವಯ ಜಿಲ್ಲೆಯ ಎಂಡಿಸಿಸಿ ಬ್ಯಾಂಕ್‍ನಿಂದ ರೈತರು ಪಡೆದಿದ್ದ 11 ಕೋಟಿ ರೂ. ಮನ್ನಾ ಆಗಲಿದೆ ಎಂದರು.

ಚಾಮರಾಜನಗರ ವಲಯದಿಂದ 45 ಲಕ್ಷ ರೂ., ಗುಂಡ್ಲುಪೇಟೆ ಮತ್ತು ತೆರಕಣಾಂಬಿ ವಲಯದಿಂದ 9 ಕೋಟಿ, ಕೊಳ್ಳೇಗಾಲ ದಿಂದ 72 ಲಕ್ಷ, ಸಂತೇಮರಹಳ್ಳಿ ವಲಯದಿಂದ 19 ಲಕ್ಷ ರೂ., ಯಳಂದೂರು ವಲಯದಿಂದ 6 ಲಕ್ಷ ರೂ., ಹನೂರಿ ನಿಂದ 5.70 ಲಕ್ಷ ರೂ. ಸಾಲಮನ್ನಾ ಆಗಲಿದೆ ಎಂದರು.

ಒಟ್ಟಾರೆ ಜಿಲ್ಲೆಯಿಂದ ಎಷ್ಟು ರೈತರಿಗೆ, ಎಷ್ಟು ಕೋಟಿ ರೂ. ಸಾಲಮನ್ನಾ ಆಗಲಿದೆ ಎಂಬ ವಿವರವನ್ನು ಸಂಗ್ರಹಿಸ ಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಅಧಿಕಾರಿ ಉತ್ತರಿಸಿದರು. ಸಾಲ ಮರುಪಾವತಿ ಮಾಡಿರುವ ರೈತರಿಗೆ ಸಹಾಯಧನ ನೀಡುವ ಬಗ್ಗೆ ಸರ್ಕಾರದಿಂದ ಇನ್ನೂ ಆದೇಶ ಬಂದಿಲ್ಲ ಎಂದರು.