ಹೋಟೆಲ್ ಮಾಲೀಕರಿಗೆ 17.5 ಲಕ್ಷ ರೂ. ಮೌಲ್ಯದ ನಾಣ್ಯ ವಿತರಣೆ

ಮೈಸೂರು,ಜ.18-ಮೈಸೂರು ನಗರದ ಹೋಟೆಲ್‍ಗಳು ಮತ್ತು ರೆಸ್ಟೋರೆಂಟ್‍ಗಳಲ್ಲಿ ಚಿಲ್ಲರೆ ಅಭಾವದಿಂದಾಗಿ ವ್ಯವಹಾರ ನಡೆಸಲು ತುಂಬಾ ತೊಂದರೆಯಾಗಿತ್ತು. ಇದನ್ನು ಮನಗಂಡು ಪ್ರಪ್ರಥಮ ಬಾರಿಗೆ ಮೈಸೂರಿನ ಹೋಟೆಲ್ ಮಾಲೀ ಕರಿಗೆ 17.5 ಲಕ್ಷ ರೂ. ಮೌಲ್ಯದ ನಾಣ್ಯಗಳನ್ನು ಮೈಸೂರು ಹೋಟೆಲ್ ಮಾಲೀಕರ ಸಂಘದಿಂದ ವಿತರಿಸಲಾಯಿತು. ರೂ. 1, ರೂ. 2, ರೂ. 5 ಮತ್ತು ರೂ. 10ರ ಡಿನಾಮಿನೇಷನ್‍ವುಳ್ಳ ನಾಣ್ಯಗಳನ್ನು ಬೆಂಗಳೂರಿನ ವಿಜಯ ಬ್ಯಾಂಕ್‍ನಿಂದ ತಂದು ಹೋಟೆಲ್ ಮಾಲೀಕರಿಗೆ ತಮ್ಮ ದಿನನಿತ್ಯದ ವ್ಯವಹಾರ ಕ್ಕಾಗಿ ನೀಡಲಾಯಿತು. ನಾಣ್ಯಗಳನ್ನು ಅಂದವಾಗಿ ಗೋಣಿ ಚೀಲಗಳಲ್ಲಿ ತುಂಬಿಸಿ, ಬೆಂಗಳೂರಿನಿಂದ ಟ್ರಕ್‍ಗಳಲ್ಲಿ ತಂದು ವಿತರಿಸಲಾ ಯಿತು. ಇದೇ ವೇಳೆ ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾ ಯಣಗೌಡ ಮಾತನಾಡಿ, ಇಷ್ಟು ದೊಡ್ಡ ಮೊತ್ತದ ನಾಣ್ಯವನ್ನು ತಂದು ನಗರದ ಹೋಟೆಲ್ ಮತ್ತು ರೆಸ್ಟೋರೆಂಟ್‍ಗಳಿಗೆ ವಿತರಿಸಿರುವುದು ಇದೇ ಪ್ರಥಮವಾಗಿದೆ. ನಾಣ್ಯಗಳನ್ನು ಅಸೋಸಿಯೇಷನ್ ಕಚೇರಿಯಲ್ಲಿ ನೇರವಾಗಿ ಟ್ರಕ್‍ನಿಂದ ವಿತರಿಸಲಾಯಿತು ಎಂದರು.

ಈ ವೇಳೆ ಅಸೋಸಿಯೇಷನ್ ಪದಾಧಿಕಾರಿಗಳಾದ ರವಿಶಾಸ್ತ್ರಿ, ರವೀಂದ್ರ ಭಟ್, ಜಗದೀಶ್ ಬಾಬು, ರಾಮ್‍ಮೋಹನ್, ಸುಬ್ರಮಣ್ಯ ತಂತ್ರಿ, ಕಿರಣ್, ಅನಿಲ್ ಕುಮಾರ್, ಭಾಸ್ಕರ್ ಶೆಟ್ಟಿ, ಮಹದೇವ್ ಮತ್ತು ಉಗ್ರಯ್ಯ ಮತ್ತಿತರರು ಹಾಜರಿದ್ದರು.