ಹಾಸನ ಹಾಲು ಒಕ್ಕೂಟಕ್ಕೆ 5.65 ಕೋಟಿ ರೂ. ಲಾಭ

ಹಾಸನ: ಹಾಸನ ಸಹಕಾರಿ ಉತ್ಪಾದಕರ ಸಂಘಗಳ ಒಕ್ಕೂಟ ಈ ಬಾರಿ 5.65 ಕೋಟಿ ರೂ ಲಾಭಗಳಿಸಿದ್ದು, 3.92 ಕೋಟಿ ರೂ.ಗಳನ್ನು ಸದಸ್ಯ ಸಂಘಗಳಿಗೆ ಬೋನಸ್ ಮತ್ತು ಡಿವಿಡೆಂಡ್ ಪಾವತಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದರು.

ನಗರದ ಡೈರಿ ಆವರಣದಲ್ಲಿ ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಏರ್ಪಡಿಸಿದ್ದ ಪ್ರಸಕ್ತ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ಸೇನಾ ಸಂಸ್ಥೆಗಳಿಗೆ ಸುಮಾರು 15 ಲಕ್ಷ ಲೀ. ಯುಹೆಚ್‍ಟಿ ಹಾಲನ್ನು ಸರಬರಾಜು ಮಾಡಲಾಗುತಿದ್ದು, ಪ್ರಸಕ್ತ ವರ್ಷ ಸುಮಾರು 46 ಲಕ್ಷ ಲೀ. ಯುಹೆಚ್‍ಟಿ ಹಾಲಿಗೆ ಬೇಡಿಕೆ ಬಂದಿದ್ದು, ಸರಬರಾಜು ಮಾಡಲಾಗುತ್ತಿದೆ. ಒಕ್ಕೂಟದ ಮುಖ್ಯ ಡೇರಿಯಲ್ಲಿ ದಿನವಹಿ 20 ಸಾವಿರ ಲೀ. ಸಾಮಥ್ರ್ಯದ ಅತ್ಯಾಧುನಿಕ ಯಂತ್ರೋ ಪಕರಣಗಳಿಂದ ನಿರ್ಮಾಣ ಮಾಡುತ್ತಿ ರುವ ಐಸ್‍ಕ್ರೀಂ ಘಟಕ ಸ್ಥಾಪನೆಗೆ 40 ಕೋಟಿ ರೂ.ಅನ್ನು ಒಕ್ಕೂಟದ ಸ್ವಂತ ಬಂಡವಾಳದಿಂದ ತೊಡಗಿಸಿದೆ. ಭಾನು ವಾರ ಹಾಸನ ನಗರಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆಗಮಿ ಸುತ್ತಿದ್ದು, ನೂತನ ಐಸ್ ಕ್ರೀಂ ಉತ್ಪಾದನಾ ಘಟಕ ಉದ್ಘಾಟಿಸಲಿದ್ದಾರೆ ಎಂದರು.

ಬಿಜೆಪಿಯವರಿಗೆ ದೈವಾನುಗ್ರಹ ಇಲ್ಲ: ಬಿಜೆಪಿಯವರಿಗೆ ದೈವಾನುಗ್ರಹವಿಲ್ಲ. ಹೀಗಾಗಿ ಅವರು ಎಷ್ಟೇ ಪ್ರಯತ್ನ ಪಟ್ಟರೂ ಸಹ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಸಾಧ್ಯವಿಲ್ಲ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಹೀಗಾಗಿ ಅವರು ಮೈತ್ರಿ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಿದ್ದಾರೆ. ಇದರ ಬದಲು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ರೈತರ ಸಾಲಮನ್ನಾ ಮಾಡು ವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಬೇಕು. ಬಿಜೆಪಿಯವರಿಗೆ ದೈವಾನುಗ್ರಹ ಇಲ್ಲ. ಹೀಗಾಗಿ ಅವರು ಎಷ್ಟೇ ಪ್ರಯತ್ನಪಟ್ಟರೂ ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಮಳೆಯಿಂದ ಆಗಿರುವ ಹಾನಿಗೆ ಪರಿಹಾರದ ಹಣ ಬಿಡುಗಡೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಬಳಿ ಕೇಳಲು ರಾಜ್ಯ ಬಿಜೆಪಿ ನಾಯಕರಿಗೆ ತಾಕತ್ತಿಲ್ಲ. ಅದನ್ನು ಬಿಟ್ಟು ನಮಗೆ 300 ಕೋಟಿ ರೂ. ಕೊಡಿ ಸರ್ಕಾರ ಬೀಳಿಸ್ತೀವಿ ಅಂತ ಬೇಡಿಕೆ ಇಟ್ಟಿದ್ದಾರೆ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಸರ್ಕಾರ ಉರುಳಿಸಲು ಬಿಜೆಪಿಯವರು ಪ್ರಯತ್ನಿಸುತ್ತಲೇ ಇದ್ದಾರೆ. ಏನೇ ಮಾಡಿದರೂ ಜೆಡಿಎಸ್ ಶಾಸಕರನ್ನು ಖರೀದಿ ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದರು.

ಶನಿವಾರ ಹಾಸನದ ಹೊರವಲಯದ ಹೊಯ್ಸಳ ರೆಸಾರ್ಟ್ ನಲ್ಲಿ ಜೆಡಿಎಸ್ ಪಕ್ಷದ ಶಾಸಕಾಂಗ ಸಭೆ ನಡೆಯಲಿದ್ದು, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್‍ನ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದರು.