ಪಾಲಿಕೆಯಲ್ಲಿ ಒಂದೇ ತಿಂಗಳಿಗೆ 56.50 ಕೋಟಿ ರೂ. ತೆರಿಗೆ ಸಂಗ್ರಹ

ಮೈಸೂರು: ಸ್ವಯಂ ಪ್ರೇರಣೆಯಿಂದ ತೆರಿಗೆ ಪಾವತಿಸುವವರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೈಸೂರು ನಗರ ಪಾಲಿಕೆ ಏಪ್ರಿಲ್ ತಿಂಗಳಲ್ಲಿ ಶೇ.5 ರಿಯಾಯ್ತಿಯಡಿ ವಿಶೇಷ ಅಭಿಯಾನ ನಡೆಸಿದ ಫಲವಾಗಿ ಪಾಲಿಕೆಗೆ 56.50 ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ.

ಮೈಸೂರು ನಗರ ಪಾಲಿಕೆಯ ಎಲ್ಲಾ ವಲಯ ಕಚೇರಿಗಳಲ್ಲಿಯೂ ಏ.1ರಿಂದ 30ರ ವರೆಗೆ ವಿಶೇಷ ಅಭಿಯಾನ ನಡೆಸಲಾಗಿತ್ತು. ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಆಕ್ಟ್ 1976ರ ಅನ್ವಯ ಈ ಅಭಿಯಾನದಲ್ಲಿ ತೆರಿಗೆ ಪಾವತಿಸುವವರಿಗೆ ಶೇ.5ರಷ್ಟು ರಿಯಾಯಿತಿ ನೀಡಲು ಪಾಲಿಕೆ ನಿರ್ಧರಿಸಿತ್ತು. ಪ್ರತಿ ವರ್ಷ ರಿಯಾ ಯಿತಿ ಸೌಲಭ್ಯವನ್ನು ಪಾಲಿಕೆ ನೀಡುತ್ತಿದ್ದು, ಆ ಮೂಲಕ ಸ್ವಯಂ ಪ್ರೇರಣೆಯಿಂದ ತೆರಿಗೆ ಪಾವತಿಸುವವರಿಗೆ ಉತ್ತೇಜನ ನೀಡುತ್ತಾ ಬಂದಿದೆ. ರಿಯಾಯಿತಿ ಸೌಲಭ್ಯ ಕುರಿತು ಪಾಲಿಕೆ ಎಲ್ಲಾ 65ವಾರ್ಡ್‍ಗಳಲ್ಲಿಯೂ ಪ್ರಚಾರ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಯಾರ ಒತ್ತಡವೂ ಇಲ್ಲದೆ ಮೂರನೇ ಒಂದರಷ್ಟು ತೆರಿಗೆದಾರರು ಏಪ್ರಿಲ್ ತಿಂಗಳಲ್ಲಿಯೇ ತೆರಿಗೆ ಪಾವತಿಸಿದ್ದಾರೆ. ಇದರಿಂದ ವರ್ಷದಾರಂಭದ ಮೊದಲ ತಿಂಗಳಲ್ಲಿಯೇ ಪಾಲಿಕೆ ಬೊಕ್ಕಸಕ್ಕೆ 56.50 ಕೋಟಿ ರೂ. ಸಂಗ್ರಹವಾಗಿದೆ.

ಮೇ ಮತ್ತು ಜೂನ್ ತಿಂಗಳಲ್ಲಿ ತೆರಿಗೆ ಪಾವತಿಸುವವರಿಗೆ ಬಡ್ಡಿ ವಿಧಿಸುವುದಿಲ್ಲ. ಈ ಎರಡು ತಿಂಗಳಲ್ಲಿ ಇನ್ನಷ್ಟು ತೆರಿಗೆ ಹರಿದು ಬರಲಿದೆ. ಜೂನ್ ತಿಂಗಳ ನಂತರ ತೆರಿಗೆ ಪಾವತಿಸುವ ಗ್ರಾಹಕರಿಗೆ ಶೇ.2ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಅಕ್ಟೋಬರ್‍ವರೆಗೂ ತೆರಿಗೆ ಪಾವತಿಸದ ಮನೆಗಳಿಗೆ ನವೆಂಬರ್‍ನಲ್ಲಿ ಪಾಲಿಕೆ ಸಿಬ್ಬಂದಿ ತೆರಳಿ ತೆರಿಗೆ ಸಂಗ್ರಹಿಸಲಿದ್ದಾರೆ. ಅಲ್ಲದೆ ದಂಡದೊಂದಿಗೆ ಏಪ್ರಿಲ್ ತಿಂಗಳಿಂದ ಶೇ.2ರಷ್ಟು ಬಡ್ಡಿಯನ್ನೂ ಪಾವತಿಸಬೇಕಾಗುತ್ತದೆ. ಕಳೆದ ಸಾಲಿನಲ್ಲಿ 127 ಕೋಟಿ ರೂ. ಗುರಿ ಹೊಂದಿದ್ದ ಪಾಲಿಕೆ 130 ಕೋಟಿ ರೂ. ಸಂಗ್ರಹಿಸಿತ್ತು. ಈ ವರ್ಷ ಎಲ್ಲಾ ಸ್ವಯಂ ಆದಾಯ ಮೂಲಗಳಿಂದ ಪಾಲಿಕೆ 250 ಕೋಟಿ ಯಿಂದ 280 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ವರ್ಷ 1.97 ಲಕ್ಷ ತೆರಿಗೆದಾರರಿದ್ದು, ಈ ಬಾರಿ ಕೆಲವು ಹೊಸ ಬಡಾವಣೆಗಳು ಪಾಲಿಕೆ ವ್ಯಾಪ್ತಿಗೆ ಸೇರಿರುವುದರಿಂದ ತೆರಿಗೆದಾರರ ಸಂಖ್ಯೆಯಲ್ಲಿ ಹೆಚ್ಚಳವಾಗ ಲಿದ್ದು, ಇದರ ಮಾಹಿತಿ ಕಲೆ ಹಾಕುವಂತೆ ವಲಯ ಕಚೇರಿಗಳ ಕಂದಾಯಾಧಿ ಕಾರಿಗಳಿಗೆ ಸೂಚನೆ ನೀಡಲಾಗಿದೆ.