ಪ್ರತಿ ಬುಧವಾರದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ಮೈಸೂರು, ಜೂ.26 (ಪಿಎಂ)- ಮೈಸೂರು ನಗರದಲ್ಲಿ ಸ್ವಚ್ಛತೆಯನ್ನು ಪರಿಣಾಮಕಾರಿಯಾಗಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆ `ಬುಧವಾರ ಸ್ವಚ್ಛತಾ ದಿವಸ-2020’ ಅಭಿಯಾನ ಆರಂಭಿಸಿದೆ.

ಒಂದು ವರ್ಷದ ಅವಧಿಯಲ್ಲಿ ಈ ಅಭಿಯಾನದ ಮೂಲಕ ಸ್ವಚ್ಛತೆಯನ್ನು ಪರಿಣಾಮಕಾರಿಯಾಗಿ ಕಾಯ್ದುಕೊಳ್ಳುವ ಜೊತೆಗೆ ಸ್ವಚ್ಛತೆ ಕುರಿತಂತೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ. ಅದರಂತೆ ಪ್ರತಿ ಬುಧವಾರ ಎಲ್ಲಾ 65 ವಾರ್ಡ್‍ಗಳಲ್ಲಿ ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಸ್ವಚ್ಛತಾ ಕಾರ್ಯ ನಡೆಯಲಿದೆ.

ಚಾಲನೆ: ಸ್ವಚ್ಛತಾ ದಿವಸ ಅಭಿಯಾನಕ್ಕೆ ಒಂದು ದಿನ ಮುಂಗಡವಾಗಿ ಮಂಗಳ ವಾರವೇ ಚಾಲನೆ ನೀಡಲಾಗಿದ್ದು, ಇನ್ನು ಮುಂದೆ ಪ್ರತಿ ಬುಧವಾರ ಸ್ವಚ್ಛತಾ ಶ್ರಮ ದಾನ ನಡೆಯಲಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗಿಡಗಂಟಿ ತೆಗೆದು ಸ್ವಚ್ಛಗೊಳಿ ಸುವ ಮೂಲಕ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅಭಿಯಾನಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಮೈಸೂರು ನಗರ ಮತ್ತೊಮ್ಮೆ ಸ್ವಚ್ಛ ನಗರ ಸಾಲಿನಲ್ಲಿ ಪ್ರಥಮ ಸ್ಥಾನ ಪಡೆದು ಕೊಳ್ಳುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ವರ್ಷದ ಎಲ್ಲಾ ದಿನ ಗಳಲ್ಲೂ ಪರಿಣಾಮಕಾರಿಯಾಗಿ ಸ್ವಚ್ಛತಾ ಕಾರ್ಯ ನಡೆಸಬೇಕು. ಇದಕ್ಕೆ ಸಾರ್ವಜನಿ ಕರು ಅಗತ್ಯ ಸಹಕಾರ ನೀಡಬೇಕು. ಸ್ವಚ್ಛತೆ ಕಾಯ್ದುಕೊಳ್ಳುವುದರಿಂದ ಆರೋಗ್ಯ ರಕ್ಷ ಣೆಗೂ ಪೂರಕ ವಾತಾವರಣ ನಿರ್ಮಾಣ ಆಗಲಿದೆ ಎಂದು ಅಭಿಪ್ರಾಯಪಟ್ಟರು.

ಮೇಯರ್ ಪುಷ್ಪಲತಾ ಜಗನ್ನಾಥ್, ಉಪಮೇಯರ್ ಶಫಿ ಅಹಮದ್, ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಅಪರ ಜಿಲ್ಲಾಧಿ üಕಾರಿ ಬಿ.ಆರ್. ಪೂರ್ಣಿಮಾ, ಪಾಲಿಕೆ ಹೆಚ್ಚುವರಿ ಆಯುಕ್ತ ಶಿವಾನಂದಮೂರ್ತಿ ಸೇರಿದಂತೆ ಹಲವು ಅಧಿಕಾರಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.