`ಉದ್ಯೋಗ ಖಾತ್ರಿ’ಯಿಂದ ಗ್ರಾಮೀಣಾಭಿವೃದ್ಧಿ

ಎಚ್.ಡಿ.ಕೋಟೆ: ಉದ್ಯೋಗ ಖಾತ್ರಿಯಿಂದ ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುಕೂಲ ವಾಗಲಿದ್ದು, ಈ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಗೊಳಿಸುವಂತೆ ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳಿಗೆ ಶಾಸಕ ಸಿ.ಅನಿಲ್ ಕುಮಾರ್ ಕಿವಿಮಾತು ಹೇಳಿದರು.

ತಾಲೂಕಿನ ಮನುಗನಹಳ್ಳಿ ಗ್ರಾಮದಲ್ಲಿ 16 ಲಕ್ಷ ರೂ. ವೆಚ್ಚದ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತ ನಾಡಿದ ಅವರು, ಗ್ರಾಮಗಳ ಅಭಿವೃದ್ಧಿಗೆ ಉದ್ಯೋಗ ಖಾತ್ರಿ ಯೋಜನೆ ಪೂರಕ ವಾಗಿದೆ. ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು ಸದ್ಬಳಕೆ ಮಾಡಿ ಕೊಳ್ಳುವಲ್ಲಿ ಈ ಬಾರಿ ಎಚ್.ಡಿ.ಕೋಟೆ ಮೊದಲ ಸ್ಥಾನದಲ್ಲಿದೆ. ಸುಮಾರು 14 ಕೋಟಿ ರೂ. ಅನುದಾನ ಸದ್ಬಳಕೆ ಮಾಡಿ ಕೊಳ್ಳುವ ಮೂಲಕ ಅಭಿವೃದ್ಧಿ ಕೆಲಸ ಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.

ತಾಲೂಕಿನಲ್ಲಿ ಜಿ.ಬಿ.ಸರಗೂರು ಮತ್ತು ಸವ್ವೆ ಗ್ರಾಪಂ ಮೊದಲ ಸ್ಥಾನದಲ್ಲಿದ್ದು, ಬಾಚೇಗೌಡನಹಳ್ಳಿ ಕೊನೆ ಸ್ಥಾನದಲ್ಲಿದೆ. ಗ್ರಾಮ ಸಭೆ ಸಂದರ್ಭದಲ್ಲಿ ಗ್ರಾಮಸ್ಥರು ಭಾಗವಹಿಸಿ ಅಭಿವೃದ್ಧಿಗಾಗಿ ಕೈ ಜೋಡಿಸ ಬೇಕು. ಮಹಾತ್ಮ ಗಾಂಧೀಜಿ ಕಂಡ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕಿದೆ ಎಂದು ಮನವಿ ಮಾಡಿದರು.

ಗ್ರಾಮದ ರಸ್ತೆ, ಚರಂಡಿ, ಅಂಗನವಾಡಿ, ಶಾಲಾ ಕಾಂಪೌಂಡ್, ದನದ ಕೊಟ್ಟಿಗೆ ಇನ್ನೂ ಹತ್ತಾರು ಕೆಲಸಗಳನ್ನು ಈ ಉದ್ಯೋಗ ಖಾತ್ರಿಯಲ್ಲಿ ಮಾಡಲು ಗ್ರಾಮಸ್ಥರು ಮುಂದಾಗಬೇಕಾಗಿದೆ. ಇಬ್ಜಾಲ ಏತ ನೀರಾವರಿ ಯೋಜನೆ ಕಾಮಗಾರಿ 28 ಕೋಟಿ ರೂ. ವೆಚ್ಚದಲ್ಲಿ ಶೀಘ್ರವೇ ನಡೆಯಲಿದ್ದು, ಈ ಮೂಲಕ 48 ಕೆರೆಗಳಿಗೆ ನೀರು ತುಂಬಿಸುವ ಕ್ರಮ ವಹಿಸಲಾಗುವುದು ಎಂದರಲ್ಲದೆ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಂಪಾ ಪುರದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ರೈತ ಸಂಪರ್ಕ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಇದರಿಂದ ಅನೇಕ ರೈತರಿಗೆ ಅನುಕೂಲ ವಾಗಲಿದೆ ಎಂದು ತಿಳಿಸಿದರು. ಸಂಸದ ಆರ್.ಧ್ರುವನಾರಾಯಣ, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ್, ಮಾಜಿ ಸದಸ್ಯ ರಾದ ಭಾಗ್ಯಲಕ್ಷ್ಮಿ, ನಂದಿನಿ ಚಂದ್ರ ಶೇಖರ್, ಗ್ರಾಪಂ ಅಧ್ಯಕ್ಷ ಅಡಹಳ್ಳಿ ಮಂಜುನಾಥ್, ತಾಪಂ ಸದಸ್ಯ ಅಂಕ ನಾಯಕ, ಗುರುಸ್ವಾಮಿ, ಪುರಸಭೆ ಸದಸ್ಯ ಎಚ್.ಸಿ.ನರಸಿಂಹ ಮೂರ್ತಿ, ಸೋಮ ಶೇಖರ್, ಮುಖಂಡರಾದ ಮನುಗನ ಹಳ್ಳಿ ಮಾದಪ್ಪ ಇದ್ದರು.