ಸಂತೇಮರಹಳ್ಳಿ-ಮೂಗೂರು ಹದಗೆಟ್ಟ ರಸ್ತೆ: ಸಂಚಾರ ದುಸ್ತರ ಪ್ರಯಾಣಿಕರಿಗೆ ಕಿರಿಕಿರಿ, ವಾಹನ ಚಾಲನೆಗೆ ಚಾಲಕರ ಹರಸಾಹಸ

ಚಾಮರಾಜನಗರ: ರಸ್ತೆ ತುಂಬೆಲ್ಲಾ ಗುಂಡಿಗಳ ದರ್ಬಾರ್, ಅಲ್ಲಲ್ಲಿ ಚದುರಿ ಬಿದ್ದಿರುವ ಕಲ್ಲುಗಳು, ಧೂಳಿನಿಂದ ಆವೃತ್ತವಾಗಿರುವ ರಸ್ತೆ ಇಕ್ಕೆಲ್ಲೆಗಳು, ವಾಹನ ಚಾಲನೆ ಮಾಡಲು ಪರದಾಡುತ್ತಿರುವ ಬಸ್, ಕಾರು, ಲಾರಿ ಚಾಲಕರು… ಧೂಳು- ಹಳ್ಳಗಳ ನಡುವೆ ನಿಧಾನವಾಗಿ ಸಾಗುತ್ತಿರುವ ಬೈಕ್ ಸವಾರರು… ದೇವರೇ ಯಾವಾಗ ಈ ರಸ್ತೆ ಅಭಿವೃದ್ಧಿಯಾಗುತ್ತದೆ ಎಂದು ಮನ ದಲ್ಲಿಯೇ ಶಪಿಸುತ್ತಿರುವ ಪ್ರಯಾಣಿಕರು…

ಇದು ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿ ಹೋಬಳಿಯಿಂದ ಮೂಗೂರಿಗೆ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ ಕಂಡು ಬರುತ್ತಿರುವ ದೃಶ್ಯ. ಹೋಬಳಿ ಕೇಂದ್ರವಾದ ಸಂತೇಮರಹಳ್ಳಿ ಯಿಂದ ಮೂಗೂರು ಕ್ರಾಸ್(ಜಂಕ್ಷನ್) ವರೆಗಿನ ಜಿಲ್ಲಾ ಮುಖ್ಯ ರಸ್ತೆ ತುಂಬ ಹದ ಗೆಟ್ಟಿದ್ದು ಈ ರಸ್ತೆಯಲ್ಲಿ ಸಂಚರಿಸುವವರು ಜೀವವನ್ನೇ ಕೈಯಲ್ಲಿ ಹಿಡಿದು ಪ್ರಯಾಣಿ ಸುವಂತಾಗಿದೆ.

ಸಂತೇಮರಹಳ್ಳಿಯಿಂದ ಮೂಗೂರು ಕ್ರಾಸ್‍ವರೆಗೆ ಸುಮಾರು 10ಕಿ.ಮೀ. ರಸ್ತೆ ಸಂಚರಿಸಲು ಯೋಗ್ಯವಾಗಿಲ್ಲ. ಅಲ್ಲಲ್ಲಿ ಹಳ್ಳಗಳು ಸೃಷ್ಟಿಯಾಗಿದ್ದು, ವಾಹನ ಸವಾರರು, ಪ್ರಯಾಣಿಕರು ಈ ರಸ್ತೆಯಲ್ಲಿ ಸಂಚರಿಸುವಾಗ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಇಡೀ ಶಾಪ ಹಾಕುತ್ತಿದ್ದಾರೆ.

ಸಂತೇಮರಹಳ್ಳಿಯಿಂದ ಟಿ.ನರಸೀಪುರ ಮಾರ್ಗವಾಗಿ ಮೈಸೂರಿಗೆ ತೆರಳು ಮುಖ್ಯ ರಸ್ತೆ ಇದ್ದಾಗಿದೆ. ಕೆಎಸ್‍ಆರ್‍ಟಿಸಿ, ಖಾಸಗಿ ಬಸ್, ಕಾರು, ಗೂಡ್ಸ್‍ವಾಹನ ಸೇರಿದಂತೆ ನಿತ್ಯವೂ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಈ ಮಾರ್ಗದಲ್ಲಿ ಬಸವಟ್ಟಿ, ಕಾವುದವಾಡಿ, ಕಮರವಾಡಿ, ಬಾಗಳ್ಳಿ, ತೆಳ್ಳನೂರು ಗ್ರಾಮಗಳಿದ್ದು, ಈ ಹದಗೆಟ್ಟ ರಸ್ತೆಯಿಂದ ಗ್ರಾಮಸ್ಥರು ಕಿರಿಕಿರಿ ಅನುಭವಿಸುತ್ತಿದ್ದಾರೆ.

‘ಎರಡು ವರ್ಷಗಳಿಂದ ರಸ್ತೆ ಅಭಿವೃದ್ಧಿ ಭಾಗ್ಯವನ್ನೇ ಕಂಡಿಲ್ಲ. ರಸ್ತೆ ಸಂಪೂರ್ಣ ಹದ ಗೆಟ್ಟಿದೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸಲು ಸಾಕಷ್ಟು ಕಷ್ಟವಾಗುತ್ತದೆ. ಈಗಾಗಲೇ ಇಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿ ಸಾವು-ನೋವುಗಳು ಆಗಿದೆ. ಆದರೂ, ಅಧಿಕಾರಿಗಳಾಗಲಿ ಅಥವಾ ಜನ ಪ್ರತಿನಿಧಿಗಳಾಗಲಿ ಈ ಬಗ್ಗೆ ತಲೆಕೆಡಿಸಿ ಕೊಳ್ಳುತ್ತಿಲ್ಲ’ ಎಂದು ಪ್ರಯಾಣಿಕ ಹಾಲನ ಹಳ್ಳಿ ತೋಟೇಶ್ ಹೇಳಿದರು.

ಸಂತೇಮರಹಳ್ಳಿಯಿಂದ ಮೂಗೂರು ವರೆಗಿನ ರಸ್ತೆ ಹದಗೆಟ್ಟಿರುವುದು ಒಂದು ಕಡೆಯಾದರೆ, ಚಾಮರಾಜನಗರದಿಂದ ಸಂತೇಮರಹಳ್ಳಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯಿಂದ ರಸ್ತೆಯನ್ನು ಅಗೆಯಲಾಗಿದೆ. ಇದರಿಂದ ಚಾಮರಾಜ ನಗರದಿಂದ ಮೂಗೂರುವರೆಗೆ ಸಂಚರಿ ಸಲು ಪ್ರಯಾಣಿಕರು, ವಾಹನ ಚಾಲಕರು ಪರದಾಡುವಂತಾಗಿದೆ.

ಸಂತೇಮರಹಳ್ಳಿಯಿಂದ ಮೂಗೂರು ಕ್ರಾಸ್‍ವರೆಗೆ ನಿತ್ಯವೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಯಾಣಿಸುತ್ತಾರೆ. ಆದರೂ, ರಸ್ತೆ ಸರಿಪಡಿಸುವ ಕೆಲಸವನ್ನು ಅವರು ಮಾಡುತ್ತಿಲ್ಲ. ಇನ್ನಾದರೂ ರಸ್ತೆ ಅಭಿವೃದ್ಧಿಗೆ ಕ್ರಮಹಿಸಬೇಕು. ಇಲ್ಲದಿದ್ದರೇ ಗ್ರಾಮಸ್ಥರೆಲ್ಲ ಸೇರಿ ರಸ್ತೆ ತಡೆ ನಡೆಸಿ ಪ್ರತಿ ಭಟನೆ ನಡೆಸಲು ಚಿಂತಿಸುತ್ತಿದ್ದಾರೆ.

ಹಾಗಾಗಿ, ಗ್ರಾಮಸ್ಥರು ತಾಳ್ಮೆ ಕಳೆದುಕೊಳ್ಳುವ ಮುನ್ನವೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೇತ್ತು ರಸ್ತೆ ಅಭಿವೃದ್ಧಿಗೆ ಕ್ರಮವಹಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಸಂತೇಮರಹಳ್ಳಿಯಿಂದ ಮೂಗೂರು ಕ್ರಾಸ್‍ವರೆಗಿನ ಹೆದ್ದಾರಿಯ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ಒಂದು ವಾರದೊಳಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಲಾಗುವುದು. – ವಾಸು, ಇಂಜಿನಿಯರ್, ಪಿಡಬ್ಲ್ಯೂಡಿ ಇಲಾಖೆ