ಸುಟ್ಟು ಕರಕಲಾಗುತ್ತಿರುವ ಬಂಡೀಪುರ ನೋಡಿ ಮಮ್ಮಲ ಮರುಗಿದ ಸಚಿವ ಸತೀಶ್ ಜಾರಕಿಹೊಳಿ

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿ ಯಲ್ಲಿ ಕಾಡ್ಗಿಚ್ಚಿನಿಂದ ಸುಟ್ಟುಹೋಗಿರುವ ಪ್ರದೇ ಶಗಳಿಗೆ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ, ಪರಿಲೀಶಿಸಿದರು.

ಬಂಡೀಪುರ ಅರಣ್ಯ ವಲಯಕ್ಕೆ ಸೇರಿದ ಮೇಲು ಕಾಮನಹಳ್ಳಿ ಅರಣ್ಯ, ಹಿಮವದ್ ಗೋಪಾಲ ಸ್ವಾಮಿ ಅರಣ್ಯ ವಲಯದಲ್ಲಿ ಕಾಡ್ಗಿಚ್ಚಿನಿಂದ ಹತ್ತಾರು ಸಾವಿರ ಎಕರೆಗಳಷ್ಟು ಅರಣ್ಯ ಸಂಪೂ ರ್ಣವಾಗಿ ನಾಶವಾಗಿರುವ ಪ್ರದೇಶಗಳಿಗೆ ಭೇಟಿ ನೀಡಿದ ಸಚಿವರು ಮಮ್ಮಲ ಮರುಗಿದರು.

ಬೆಂಕಿಯಿಂದ ಹಾನಿಗೊಳಗಾಗಿರುವ ಪ್ರದೇಶ ಗಳಲ್ಲಿ ವೀಕ್ಷಣೆ ಮಾಡಿ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಅರಣ್ಯದ ಬಗ್ಗೆ ಪ್ರೀತಿ ಹೊಂದಿರುವ ನನಗೆ ಇಲ್ಲಿನ ಪರಿಸ್ಥಿತಿ ಯನ್ನು ನೋಡಿದರೆ ತೀವ್ರ ನೋವಾಗುತ್ತಿದೆ. ಕಾಡಿಗೆ ಬಿದ್ದಿರುವ ಬೆಂಕಿ ಪ್ರಕೃತಿ ಸಹಜವೋ ಅಥವಾ ಕಿಡಿಗೇಡಿಯ ಕೃತ್ಯವೋ ಎಂಬುದರ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಅಧಿ ಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಬಂಡೀಪುರ ಅರಣ್ಯ ಮತ್ತು ಹಿಮವದ್ ಗೋಪಾ ಲಸ್ವಾಮಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಕಾಡು ಬೆಂಕಿಗೆ ಆಹುತಿಯಾಗಿದ್ದು, ನಿಖರವಾಗಿ ಎಷ್ಟು ಎಕರೆ ಎಂದು ಹೇಳಲಾಗದ್ದಿ ದ್ದರೂ ಸಹ ಮೂರು ಸಾವಿರಕ್ಕೂ ಹೆಚ್ಚು ದಟ್ಟಾ ರಣ್ಯ ಕಾಡ್ಗಿಚ್ಚಿನಿಂದ ಬೆಂಕಿಗೆ ಆಹುತಿಯಾಗಿದೆ ಎಂದು ಅಂದಾಜಿಸಲಾಗಿದೆ. ಭಾನುವಾರ ಮತ್ತು ಸೋಮವಾರದಂದು ನಾನು ಇಲ್ಲೇ ಇದ್ದು ಕಾರ್ಯಾ ಚರಣೆ ವೀಕ್ಷಿಸಲಿದ್ದೇನೆ. ಕಾಡಿನ ಬಗ್ಗೆ ಎಲ್ಲರೂ ಅಭಿಮಾನವನ್ನು ಇಟ್ಟು ಕೊಳ್ಳಬೇಕು. ಈ ರೀತಿಯಾದರೇ ಕಾಡಿನ ರಕ್ಷಣೆ ಹೇಗೆ?. ಇಲ್ಲಿನ ಪ್ರಾಣಿ ಪಕ್ಷಿಗಳ ಗತಿ ಏನು? ಎಂಬುದು ತಿಳಿಯದಾಗಿದೆ ಎಂದು ವಿಷಾದಿಸಿದರು.

ಈಗಾಗಲೇ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿಯು ಹತೋಟಿಗೆ ಬಂದಿದ್ದು, ಶನಿವಾರ ಹೆಚ್ಚಿನ ಗಾಳಿ ಇದ್ದುದರಿಂದ ಹೆಚ್ಚಿನ ಪ್ರಮಾಣ ದಲ್ಲಿ ಕಾಡಿಗೆ ಬೆಂಕಿ ಹಬ್ಬಿದೆ. ಈಗಾಗಲೇ ಮುನ್ನೆ ಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರೂ ಸಹ ಈ ಘಟನೆಯಾಗಿರುವುದು ನೋವಿನ ಸಂಗತಿ ಎಂದು ಮರುಗಿದರು. ಮುಂದಿನ ದಿನಗಳಲ್ಲಿ ಕಾಡಿನ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವುದರೊಂ ದಿಗೆ ಆಧುನಿಕ ಉಪಕರಣಗಳನ್ನು ನೀಡುವ ಕುರಿತು ಚಿಂತನೆ ನಡೆಸಲಾಗುವುದು. ನಾಳಿನ ದಿನಗಳಲ್ಲಿ ಇರುವ ಕಾಡನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಸೋಮವಾರ ಬಂಡೀಪುರದಲ್ಲಿ ಮೊಕ್ಕಾಂ ಹೂಡಿ ಕಾರ್ಯಾಚರಣೆ ಪರಿಶೀಲಿಸಲಿದ್ದೇನೆ ಎಂದರು.

ಶಾಸಕ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ಪ್ರಕೃತಿ ಮಾತೆಯ ಮಡಿಲಿಗೆ ಬೆಂಕಿಬಿದ್ದಿರುವುದು ನೋವಿನ ಸಂಗತಿ. ಜನತೆಯೂ ಸಹ ಯಾವುದೇ ಕಾರಣಕ್ಕೂ ಕಾಡಿಗೆ ಬೆಂಕಿ ಇಡಬಾರದು. ಇದ ರಿಂದ ಭಾರೀ ಪ್ರಮಾಣದಲ್ಲಿ ವನ್ಯಜೀವಿಗಳು ಮತ್ತು ಪ್ರಾಣಿ ಪಕ್ಷಿಗಳು ಹಾಗೂ ಅಪಾರ ಅರಣ್ಯ ಸಂಪತ್ತು ನಾಶವಾಗುತ್ತದೆ. ಇದನ್ನು ಅರಿತು ಕಾಡಿನ ರಕ್ಷಣೆಗೆ ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಪ್ರಧಾನ ಅರಣ್ಯ ಸಂರಕ್ಷ ಣಾಧಿಕಾರಿ ಪುನಾತಿ ಶ್ರೀಧರ್, ಎಪಿಸಿಸಿಎಫ್ ಜಯರಾಮು, ಸಿಎಫ್ ಅಂಬಾಡಿ ಮಾಧವ್, ಎಸಿಎಫ್ ರವಿಕುಮಾರ್ ಇತರರಿದ್ದರು.