ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿ ಭದ್ರತೆ ಕೊರತೆ..!ಸಿಸಿ ಕ್ಯಾಮರಾ, ಅಗತ್ಯ ಭದ್ರತಾ ಸಿಬ್ಬಂದಿ ನೇಮಕಕ್ಕೆ ಒತ್ತಾಯ

ಅರಸೀಕೆರೆ: ನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುವ ಅರಸೀಕೆರೆ ರೈಲ್ವೆ ನಿಲ್ದಾಣ ದೇಶದ ವಿವಿಧೆಡೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್ ಕೇಂದ್ರವಾಗಿದೆ. ಆದರೆ, ಈ ನಿಲ್ದಾಣಕ್ಕೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸದಿರುವುದು ರೈಲ್ವೆ ಇಲಾಖೆಯ ಕಾರ್ಯವೈಖರಿಗೆ ಕನ್ನಡಿ ಹಿಡಿದಂತಾಗಿದೆ.

ಅರಸೀಕೆರೆ ರೈಲ್ವೆ ನಿಲ್ದಾಣವು ಮೈಸೂರು, ಬೆಂಗಳೂರು, ಹುಬ್ಬಳ್ಳಿ ಮತ್ತು ಶಿವಮೊಗ್ಗ ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್ ಆಗಿದ್ದು, ಪ್ರತಿನಿತ್ಯ ಈ ನಿಲ್ದಾಣದಿಂದ ಉತ್ತರ ಭಾರತ ಸೇರಿ ದಂತೆ ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಗೋವಾ, ಮುಂಬೈಗೆ ಸಾವಿರಾರು ಪ್ರಯಾ ಣಿಕರು ಸಂಚರಿಸುತ್ತಾರೆ. ಆದರೆ ಈ ರೈಲು ನಿಲ್ದಾಣದಿಂದ ತೆರಳುವ ಹಾಗೂ ಆಗಮಿಸುವ ಪ್ರಯಾಣಿಕರಲ್ಲಿ ಅನುಮಾ ನಾಸ್ಪದವಾಗಿ ಕಂಡು ಬರುವವರನ್ನು ಪ್ರಶ್ನಿ ಸುವ ಹಾಗೂ ಪ್ರಯಾಣಿಕರ ಸಾಮಗ್ರಿ ಗಳನ್ನು ತಪಾಸಣೆ ಮಾಡಲು ಹೆಚ್ಚಿನ ಭದ್ರತಾ ಸಿಬ್ಬಂದಿ ಇಲ್ಲದಿರುವುದು ವಿಪ ರ್ಯಾಸ. ಅಲ್ಲದೇ ನಿಲ್ದಾಣದಲ್ಲಿ ಸಿಸಿ ಕ್ಯಾಮರಾ ಅಳವಡಿಸದಿರುವುದರಿಂದ ಅಭದ್ರತೆ ವಾತಾವರಣ ನಿರ್ಮಾಣವಾಗಿದೆ.

ಬೆಂಗಳೂರಿನ ಮೆಜೆಸ್ಟಿಕ್ ಮತ್ತು ಯಶವಂತಪುರ ರೈಲ್ವೆ ನಿಲ್ದಾಣಗಳನ್ನು ಹೊರತುಪಡಿಸಿ ಮೈಸೂರು ವಿಭಾಗದಲ್ಲಿ ಅರಸೀಕೆರೆ ದೊಡ್ಡ ರೈಲ್ವೆ ಜಂಕ್ಷನ್ ಆಗಿ ಕಾರ್ಯ ನಿರ್ವಹಿಸುತ್ತಿದೆ. ಆದರೂ ಈ ನಿಲ್ದಾಣಕ್ಕೆ ಹೆಚ್ಚಿನ ಭದ್ರತಾ ಸಿಬ್ಬಂದಿ ನೇಮಕ ಮಾಡಿಲ್ಲ. ಹೀಗಾಗಿ ಹತ್ತಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೇ ಈಗಲೂ ಕಾರ್ಯ ನಿರ್ವ ಹಿಸುತ್ತಿದ್ದಾರೆ. ಕೆಲ ಸೂಕ್ಷ್ಮ ಸಮಯಗಳಲ್ಲಿ ಹೆಚ್ಚಿನ ಭದ್ರತೆ ಅವಶ್ಯಕತೆ ಇದ್ದಲ್ಲಿ ಮೈಸೂ ರಿನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಿಬ್ಬಂದಿಗಳನ್ನು ನಿಯೋಜಿಸಬೇ ಕಾಗಿದೆ. ಇದಕ್ಕೆ ಬದಲಾಗಿ ಜಿಲ್ಲಾ ಕೇಂದ್ರ ಹಾಸನದಲ್ಲಿ ಪ್ರತ್ಯೇಕ ತುರ್ತು ಭದ್ರತಾ ಘಟಕ ಸ್ಥಾಪಿಸಬೇಕಾದ ಅನಿವಾರ್ಯತೆ ಇದೆ. ಈ ಬಗ್ಗೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಿ ಸೂಕ್ತ ಭದ್ರತೆಗೆ ಕ್ರಮ ಗಳನ್ನು ಕೈಗೊಳ್ಳಬೇಕಿದೆ.

ಅರಸೀಕೆರೆ ರೈಲು ನಿಲ್ದಾಣದಲ್ಲಿ ಕರ್ನಾ ಟಕ ರೈಲ್ವೆ ಪೊಲೀಸ್ ಮತ್ತು ಆರ್‍ಪಿಎಫ್ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣ ಮಾಡಿದ ಕಟ್ಟಡದಲ್ಲಿ ಬೆರಳೆಣಿಕೆಯಷ್ಟು ಸಿಬ್ಬಂದಿ ಗಳು ಮಾತ್ರ ಇಲ್ಲಿ ಕಾರ್ಯ ನಿರ್ವಹಿಸು ತ್ತಿದ್ದಾರೆ. ಆದರೆ, ಇಲ್ಲಿನ ಕೆಲವು ಸಿಬ್ಬಂದಿ ಆಯಾ ಸಮಯದಲ್ಲಿ ಕರ್ತವ್ಯಕ್ಕೆ ಹಾಜ ರಾಗದೇ ಗೈರು ಹಾಜರಾಗುತ್ತಾರೆ ಎಂಬ ಆರೋಪ ಕೇಳಿ ಬಂದಿದೆ.

ಹೆಚ್ಚಿನ ಭದ್ರತೆಗೆ ಆಗ್ರಹ: ಇತ್ತೀಚೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ಪ್ರವಾಸಿ ತಾಣ ಸೇರಿದಂತೆ ಸರ್ಕಾರಿ ಸ್ಥಳಗಳಲ್ಲಿ ಭದ್ರತಾ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮ ವಾಗಿ ಕಣ್ಗಾವಲು ಹಾಕಲು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆ ಹಿತ ದೃಷ್ಟಿಯಿಂದ ರೈಲ್ವೆ ನಿಲ್ದಾಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ರೈಲ್ವೆ ನಿಲ್ದಾ ಣಕ್ಕೆ ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋ ಜಿಸಿ ಅನುಮಾನಸ್ಪಾದ ವ್ಯಕ್ತಿಗಳನ್ನು ಪ್ರಶ್ನಿ ಸುವ ಮತ್ತು ತಪಾಸಣೆ ಮಾಡುವ ಮೂಲಕ ಇಲ್ಲಿಗೆ ಆಗಮಿಸುವ ಪ್ರಯಾಣಿ ಕರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು ಎನ್ನು ವುದು ಸಾರ್ವಜನಿಕರ ಒತ್ತಾಯ.

ವಿಸ್ತರಣೆಗೊಂಡ ರೈಲು ನಿಲ್ದಾಣದಲ್ಲಿ ಬೇಕು ಪ್ರಯಾಣಿಕರಿಗೆ ಭದ್ರತೆ: ಇತ್ತೀಚಿನ ವರ್ಷಗಳಲ್ಲಿ ಅರಸೀಕೆರೆಯಿಂದ ಬೆಂಗ ಳೂರಿಗೆ ಮತ್ತು ಹುಬ್ಬಳ್ಳಿ ಕಡೆಗೆ ಸಂಚರಿ ಸುವ ರೈಲು ಮಾರ್ಗಗಳನ್ನು ಜೋಡಿ ಮಾರ್ಗಗಳನ್ನಾಗಿ ಅಭಿವೃದ್ಧಿಪಡಿಸಲಾ ಗುತ್ತಿದ್ದು, ಉಳಿದ ಕಾಮಗಾರಿಗಳು ಮುಗಿ ಯುವ ಹಂತದಲ್ಲಿ ಇದೆ. ಇಂತಹ ಸಂದ ರ್ಭದಲ್ಲಿ ಅರಸೀಕೆರೆ ರೈಲು ನಿಲ್ದಾಣವನ್ನು ವಿಸ್ತರಣೆ ಮಾಡುವುದರ ಮೂಲಕ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ, ಈ ನಿಲ್ದಾಣವು ಸುಮಾರು 2ಕಿ.ಮೀ ನಷ್ಟು ಅಗಲದ ವಿಸ್ತಾರವನ್ನು ಹೊಂದಿದ್ದು, ಈ ಇಡೀ ನಿಲ್ದಾಣವನ್ನು ಕೇವಲ ಮೂರ ರಿಂದ ನಾಲ್ಕು ಪೊಲೀಸ್ ಅಥವಾ ಆರ್ ಪಿಎಫ್ ಸಿಬ್ಬಂದಿ ಅವಲೋಕಿಸಬೇಕಾಗಿದೆ.

ಸಿಬ್ಬಂದಿಗಳ ಕೊರತೆಯಿಂದ ಪ್ರಯಾ ಣಿಕರಿಗೆ ಸೂಕ್ತ ಭದ್ರತೆ ಇಲ್ಲದಂತಾಗಿದೆ. ಈ ನಿಲ್ದಾಣವು ಭಿಕ್ಷುಕರಿಗೆ ಮತ್ತು ಅಲೆ ಮಾರಿಗಳಿಗೆ ಆಶ್ರಯ ನೀಡುವ ತಾಣವಾ ಗಿದ್ದು, ರೈಲು ನಿಲ್ದಾಣದ ಪ್ಲಾಟ್ ಫಾರಂ ಸೇರಿದಂತೆ ನಿಲ್ದಾಣದ ಹೊರ ಭಾಗಗಳಲ್ಲಿ ಹೇಳುವವರು ಮತ್ತು ಕೇಳುವವರು ಇಲ್ಲದಂತೆ ಆಗಿದೆ.

ಭಿಕ್ಷುಕರ ಸೋಗಿನಲ್ಲಿ ಸಮಾಜ ವಿದ್ರೋಹಿ ವ್ಯಕ್ತಿಗಳು ಏಕೆ ಈ ನಿಲ್ದಾಣದಲ್ಲಿ ಆಶ್ರಯ ಪಡೆದಿರಬಾರದು ಎಂಬ ಅನುಮಾನ ವನ್ನು ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡುವ ಪ್ರಯಾಣಿಕರು ಮತ್ತು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಾರೆ. ಈ ರೈಲು ನಿಲ್ದಾಣದ ಮೂಲಕ ಸಂಚರಿಸುವ ಪ್ರಯಾಣಿಕರ ಸಂಖ್ಯೆಗಳು ದುಪ್ಪಟ್ಟು ಆಗಿದ್ದು, ಅದಕ್ಕೆ ಪೂರಕವಾಗಿ ಟಿಕೇಟ್ ನೀಡುವ ಕೌಂಟರ್‍ಗಳನ್ನು ಒಂದರ ಬದಲಾಗಿ ಎರಡು ಕೌಂಟರ್‍ಗಳು ದಿನ ಪೂರ್ತಿ ಕಾರ್ಯನಿರ್ವ ಹಿಸಲು ಇಲಾಖೆ ಅಧಿಕಾರಿಗಳಾಗಲೀ ಅಥವಾ ಸ್ಥಳೀಯ ಸ್ಟೇಷನ್ ಮಾಸ್ಟರ್ ಆಗಲೀ ಕ್ರಮ ತೆಗೆದುಕೊಳ್ಳಬೇಕಾಗಿದೆ.

ಆನಂದ್ ಕೌಶಿಕ್.ಡಿ