ಮೈಸೂರಲ್ಲಿ ಪ್ರತ್ಯೇಕ ಆಕಸ್ಮಿಕ ಬೆಂಕಿ  ಪ್ರಕರಣ: ಮರ, ಗಿಡ ಆಹುತಿ

ಮೈಸೂರು,ಜ.27(ವೈಡಿಎಸ್)- ಬಿಸಿಲಿನ ಝಳ ಹೆಚ್ಚಾಯ್ತು. ಇನ್ನು ಒಣಹುಲ್ಲಿಗೆ ಸಣ್ಣ ಕಿಡಿ ತಾಕಿದ್ರೆ ಸಾಕು ಬೆಂಕಿ ಅನಾಹುತ ಕಟ್ಟಿಟ್ಟ ಬುತ್ತಿ. ಅಂಥದ್ದೆ ಘಟನೆ ಬುಧವಾರ ಮೈಸೂರಿನಲ್ಲಿ ಎರಡು ಕಡೆ ನಡೆದಿದೆ. ಆಕಸ್ಮಿಕ ಬೆಂಕಿಗೆ ಗಿಡ-ಮರಗಳು ಆಹುತಿಯಾಗಿವೆ. ಅಖಿಲ ಭಾರತ ವಾಕ್ ಮತ್ತು ಶ್ರವಣಸಂಸ್ಥೆ ಎದುರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆ ಆವರಣದಲ್ಲಿ ಬುಧವಾರ ಮಧ್ಯಾಹ್ನ 12.30ರ ವೇಳೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯತೊಡಗಿದೆ. ಇದನ್ನು ಕಂಡ ಸಾರ್ವ ಜನಿಕರೊಬ್ಬರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸರಸ್ವತಿಪುರಂನ ಅಗ್ನಿಶಾಮಕ ಠಾಣೆಯ 2 ಮತ್ತು ಹೆಬ್ಬಾಳ್ ಠಾಣೆಯ 1 ಒಟ್ಟು 3 ವಾಹನದಲ್ಲಿ 15ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳಕ್ಕಾಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟರಲ್ಲಾಗಲೇ ಬರೋ ಬ್ಬರಿ 30 ಎಕರೆ ಪ್ರದೇಶ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಗಿಡ-ಮರಗಳು ಸುಟ್ಟುಹೋಗಿದ್ದವು. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ನಾಗರಾಜ್ ಅರಸ್, ಸಹಾಯಕ ಅಗ್ನಿಶಾಮಕಾಧಿಕಾರಿ ರಾಜು, ಚಾಲಕ ಶಿವಪ್ಪ, ಸಿಬ್ಬಂದಿಗಳಾದ ದೇವರಾಜ, ಮಂಜುನಾಥ್, ಫಿರೋಜ್‍ಖಾನ್, ನಂದನ್, ಸುನೀಲ್, ಶಿವರಾಮು, ಲಕ್ಷ್ಮಣ್ ಮತ್ತಿತರರಿದ್ದರು.

ಮತ್ತೊಂದು ಪ್ರಕರಣ: ಚಾಮುಂಡಿಬೆಟ್ಟದ ನಂದಿ ಸಮೀಪ ಬೆಂಕಿ ಕಾಣಿಸಿಕೊಂಡು ಆತಂಕ ಉಂಟು ಮಾಡಿತ್ತು. ಬುಧವಾರ ಸಂಜೆ 5 ಗಂಟೆ ವೇಳೆ ನಂದಿ ಮೂರ್ತಿ ಬಳಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಕಂಡ ಸಾರ್ವಜನಿಕರೊಬ್ಬರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಇದೇ ವೇಳೆ ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಅಗ್ನಿಶಾಮಕ ವಾಹನ ಬರುವಷ್ಟರಲ್ಲೇ ಬೆಂಕಿ ನಂದಿಸಿದ್ದರು.