ಸರಣಿ ಅಪಘಾತ: ನಾಲ್ವರಿಗೆ ಗಾಯ

ಮಂಡ್ಯ/ಶ್ರೀರಂಗಪಟ್ಟಣ, ಡಿ.24- ಬೆಂಗಳೂರು-ಮೈಸೂರು ಹೆದ್ದಾರಿಯ ಶ್ರೀರಂಗ ಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿ ಸರಣಿ ಅಪಘಾತ ನಡೆದು ಸುಮಾರು 8 ವಾಹನಗಳು ಜಖಂಗೊಂಡು ನಾಲ್ವರು ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸು, ಐಚರ್ ಗೂಡ್ಸ್ ವಾಹನ, ಸಿಮೆಂಟ್ ಲಾರಿ ಸೇರಿದಂತೆ ಐದು ಐಷಾರಾಮಿ ಕಾರುಗಳ ನಡುವೆ ಸರಣಿ ಅಪಘಾತ ನಡೆದು ಸವಾರರು ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾರೆ.

ಟಿ.ಎಂ.ಹೊಸೂರು ಗೇಟ್ ಬಳಿ ಅಳವಡಿಸಿದ್ದ ಬ್ಯಾರಿಕೇಡ್ ದಾಟುತ್ತಿದ್ದ ಸಿಮೆಂಟ್ ಲಾರಿ ಹಿಂದಿಕ್ಕಲು ವೇಗವಾಗಿ ಬಂದ ಇನೋವಾ ಕಾರು ಏಕಾಏಕಿ ನುಗ್ಗಿದ ಪರಿಣಾಮ ಲಾರಿಗೆ ಡಿಕ್ಕಿಯಾಗಿದೆ. ಇದರ ಹಿಂದೆ ಐಚರ್ ಗೂಡ್ಸ್ ವಾಹನ, ರಾಜ್ಯ ಸಾರಿಗೆ ಸಂಸ್ಥೆ ಬಸ್ಸು ಹಾಗೂ ಕ್ರೇಟಾ ಕಾರು ಸೇರಿದಂತೆ ಇನ್ನಿತರ ಕಾರುಗಳು ಸಾಲಾಗಿ ಪರಸ್ಪರ ಡಿಕ್ಕಿ ಹೊಡೆದು ನಜ್ಜುಗುಜ್ಜಾಗಿವೆ. ಘಟನೆಯಲ್ಲಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಾಯಾಳುಗಳಿಗೆ ಶ್ರೀರಂಗಪಟ್ಟಣ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಸರಣಿ ಅಪಘಾತದಿಂದ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಕೆಲಕಾಲ ಅಸ್ತವ್ಯಸ್ತ ವಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ನಜ್ಜುಗುಜ್ಜಾದ ವಾಹನಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.