ಅತ್ಯಾಚಾರಿಗಳ ಗಲ್ಲು ಶಿಕ್ಷೆ ಜಾರಿಗೆ ಕಾಲಮಿತಿ ವಿಧಿಸಿ: `ಸುಪ್ರೀಂ’ಗೆ ಕೇಂದ್ರ ಮನವಿ

ನವದೆಹಲಿ, ಜ.22- ನಿರ್ಭಯಾ ಪ್ರಕರಣ ಹಿನ್ನೆಲೆಯಲ್ಲಿ, ಅತ್ಯಾಚಾರಿಗಳ ಮರಣದಂಡನೆ ಜಾರಿಗೆ ಕಾಲಮಿತಿ ವಿಧಿಸುವಂತೆ ಹಾಗೂ 2014ರ ಜನವರಿಯ ತೀರ್ಪಿನಲ್ಲಿ ಮಾರ್ಪಾಡು ಮಾಡುವಂತೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ಮನವಿ ಮಾಡಿದೆ. ಅತ್ಯಾಚಾರ ಪ್ರಕರಣ ಸಂಬಂಧ ಮರು ಪರಿಶೀಲನಾ ಮತ್ತು ಕ್ಷಮಾದಾನ ಅರ್ಜಿಗಳ ಸಲ್ಲಿಕೆ ಕುರಿತು ಮಾರ್ಗಸೂಚಿಗಳನ್ನು ರಚಿಸುವಂತೆ ಸರ್ಕಾರ ಮನವಿ ಮಾಡಿದೆ. ಮೇಲ್ಮನವಿಗಳನ್ನು ತಿರಸ್ಕರಿಸಿದ ನಂತರ ಮರಣದಂಡನೆ ಶಿಕ್ಷೆಗೊಳಗಾಗುವ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಸಮಯದ ಮಿತಿಯನ್ನು ನಿಗದಿಪಡಿಸಬೇಕು ಎಂದು ಗೃಹ ಸಚಿವಾಲಯ ಕೋರಿದೆ. ಡೆತ್ ವಾರಂಟ್ ಜಾರಿಗೊಳಿಸಿದ 7 ದಿನಗಳಲ್ಲಿ ಕ್ಷಮಾದಾನ ಅರ್ಜಿ ಸಲ್ಲಿಸಬೇಕು. ಮತ್ತು ಅದನ್ನು ನ್ಯಾಯಾಲಯ ತಿರಸ್ಕರಿಸಿದ 14 ದಿನಗಳೊಳಗೆ ಅಪರಾಧಿಗಳನ್ನು ಗಲ್ಲಿಗೇರಿಸಬೇಕು ಎಂಬ ಮಾರ್ಗಸೂಚಿ ರೂಪಿಸುವಂತೆ ಗೃಹ ಸಚಿವಾಲಯ ಮನವಿ ಮಾಡಿದೆ.