ಪಳನಿಮೇಡು ಗ್ರಾಮದಲ್ಲಿ ದಾಯಾದಿ ಜಗಳ; ಏಳು ಮಂದಿಗೆ ಗಾಯ

ಹನೂರು:ಭೂಮಿ ವಿಚಾರವಾಗಿ ದಾಯಾದಿಗಳ ನಡುವೆ ಮಾರಾಮಾರಿ ನಡೆದು 7 ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, 14 ಜನರ ಮೇಲೆ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ಗುರುವಾರ ಜರುಗಿದೆ.
ಹನೂರು ತಾಲೂಕಿನ ರಾಮಾಪುರ ಸಮೀಪದ ಪಳನಿಮೇಡು ಗ್ರಾಮದ ಆರ್ಮುಗಂ (50) ಪತ್ನಿ ಸೆಲ್ವಿ (35) ತಂದೆ ಇರಸೆಗೌಡ (70) ನಾಚಿಮುತ್ತು (50) ರಾಮಸ್ವಾಮಿ (40) ಇರಸಾಯಿ (35) ಸುಶೀಲ (35) ಅರ್ಕಣಿ (45) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರಕರಣದ ವಿವರ: ಪಳನಿಮೇಡು ಗ್ರಾಮದ ಆರ್ಮುಗಂ ಮತ್ತು ನಾಚಿಮುತ್ತು ಸಂಬಂಧಿಗಳಾಗಿದ್ದು, ಜಮೀನು ವಿಚಾರವಾಗಿ ಇಬ್ಬರು ಸಹ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ಹಂತದಲ್ಲಿರುವಾಗಲೇ ಆರ್ಮುಗಂ ಗುರುವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ವಿವಾದಿತ ಜಮೀನಿನಲ್ಲಿ ಕಲ್ಲು ನೆಡಿಸುತ್ತಿದ್ದಾಗ ನಾಚಿಮುತ್ತು ಕಡೆಯವರು ಕಲ್ಲು ನೆಡಿಸಬಾರದೆಂದು ವಿರೋಧ ವ್ಯಕ್ತಪಡಿಸಿದ ರೆನ್ನಲಾಗಿದೆ. ಈ ವೇಳೆ ಎರಡು ಕಡೆಯವರ ನಡುವೆ ಮಾತಿನ ಚಕಮಕಿ ಉಂಟಾಗಿ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಅಲ್ಲಿದೆ ಮಚ್ಚು, ದೊಣ್ಣೆ, ಕಲ್ಲುಗಳಿಂದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಪರಿಣಾಮ ದೇಹದ ತಲೆ ಮತ್ತು ಇತರೆ ಭಾಗಗಳಿಗೆ ಗಾಯಗಳಾಗಿವೆ.

ವಿಷಯ ತಿಳಿದು ರಾಮಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಗಾಯ ಗೊಂಡವರನ್ನು ರಾಮಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ. ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಎರಡು ಕಡೆಯಿಂದ 14 ಜನರ ಮೇಲೆ ಮೊಕದ್ದಮ್ಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.