ಪ್ರಧಾನಿ ಮೋದಿ ಬಗ್ಗೆ ಹಗುರವಾಗಿ ಮಾತನಾಡುವ ಸಿದ್ದರಾಮಯ್ಯ ಅನಾಗರಿಕ

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ವಿಚಾರದಲ್ಲಿ ಅತ್ಯಂತ ಹಗುರವಾಗಿ, ಏಕವಚನದಲ್ಲಿ ಮಾತನಾಡುವ ಮಾಜಿ ಮುಖ್ಯಮಂತ್ರಿ ಹಾಗೂ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅನಾಗರಿಕ, ಉಡಾಫೆ ವ್ಯಕ್ತಿ, ಸಂಸ್ಕೃತಿ ಗೊತ್ತಿಲ್ಲದವರು ಎಂದು ಚಾಮ ರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಯಾಗಿದ್ದವರು, ದೇಶದ ಪ್ರಧಾನಿ ಬಗ್ಗೆ ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ. ಅದು ನಮ್ಮ ಸಂಸ್ಕೃತಿಯೂ ಅಲ್ಲ ಎಂದು ಟೀಕಿಸಿದ ಅವರು, ಎದುರಾಳಿಗಳ ಬಗ್ಗೆ ಗೌರವ ದಿಂದ ಮಾತನಾಡಬೇಕೆಂದು ಸಂಸದ ಆರ್.ಧ್ರುವನಾರಾಯಣ್ ಅವರು ನನಗೆ ಸಲಹೆ ನೀಡಿ ದ್ದರು. ಇದೀಗ ಅದೇ ಸಲಹೆ ಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲಿ ಎಂದು

ಸಲಹೆ ನೀಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 1200 ಮತಗಳ ಅಂತರದಿಂದ ಸಿದ್ದರಾಮಯ್ಯ ಗೆದ್ದಿದ್ದರು. ಅಲ್ಲದೇ ಅವರ ಸಂಪುಟದಲ್ಲಿದ್ದ ಹಲವರು ಸೋಲು ಅನುಭವಿಸಿದ್ದರು. ಆದರೆ ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿ ಎಂದು ಹಂಬಲಿಸುತ್ತಿರುವ ದೇಶದ 125 ಕೋಟಿ ಜನರ ಹೆಮ್ಮೆಯ ಪ್ರಧಾನಿ ಬಗ್ಗೆ ಹೀಗೆ ಮಾತನಾಡಲು ಇವರಿಗೆ ನಾಚಿಕೆಯಾಗುವುದಿಲ್ಲವೇ ಎಂದು ಟೀಕಾ ಪ್ರಹಾರ ನಡೆಸಿದರು.

ಸಚಿವ ಜಿ.ಟಿ.ದೇವೇಗೌಡ, ಮೈಸೂರಲ್ಲಿ ಮೈತ್ರಿ ಧರ್ಮ ಪಾಲನೆಯಾಗಿಲ್ಲ ಎಂದು ಬಹಿರಂಗವಾಗಿ ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿ.ಶ್ರೀನಿವಾಸ್ ಪ್ರಸಾದ್, ಅದು ಅವರ ವೈಯುಕ್ತಿಕ ಹೇಳಿಕೆ. ಒಂದೊಂದು ಕ್ಷೇತ್ರದಲ್ಲಿ ಒಂದೊಂದು ರೀತಿ ಆಗಿದೆ. ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರಲ್ಲಿ ಭಿನ್ನ ಹೇಳಿಕೆಗಳು ಹೊರ ಬಿದ್ದಿದ್ದವು. ಚಾಮರಾಜನಗರ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಬೆಂಬಲಿಸಿದ್ದಾರೆ ಎಂದು ಅನಿಸುತ್ತಿಲ್ಲ ಎಂದರು.

ಗೆಲ್ಲುವ ವಿಶ್ವಾಸ: ಕ್ಷೇತ್ರದ ಮತದಾರರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದು, ನಾನು ಗೆಲುವು ಸಾಧಿಸುವ ಸಂಪೂರ್ಣ ವಿಶ್ವಾಸವಿದ್ದು, ಬಿಜೆಪಿ ರಾಜ್ಯದಲ್ಲಿ 20 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿ.ಶ್ರೀನಿವಾಸ್ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅಲೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವರ್ಚಸ್ಸು, ಬಿ.ಶ್ರೀರಾಮುಲು ಅವರ ಪ್ರಭಾವ ಹಾಗೂ ನನ್ನ ರಾಜಕೀಯ ಅನುಭವದ ಮೇಲೆ ಲೋಕಸಭಾ ಚುನಾವಣೆಯನ್ನು ವ್ಯವಸ್ಥಿತವಾಗಿ ಎದುರಿಸಿದ್ದೇವೆ. ಗುಂಡ್ಲುಪೇಟೆ, ಚಾಮರಾಜನಗರ, ಕೊಳ್ಳೇಗಾಲ, ಹೆಚ್.ಡಿ.ಕೋಟೆ, ನಂಜನಗೂಡು ಕ್ಷೇತ್ರಗಳ ಮತದಾರರು ನನ್ನನ್ನು ಬೆಂಬಲಿಸಿರುವ ವಿಶ್ವಾಸವಿದೆ ಎಂದರು.

ಸರ್ಕಾರದ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಲ್ಲ: ಲೋಕಸಭಾ ಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ ಅಧಿಕಾರದಲ್ಲಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಭವಿಷ್ಯ ಏನಾಗಲಿದೆ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಈ ದೋಸ್ತಿಗಳ ನಡುವೆ ಸಮನ್ವಯ ಇಲ್ಲದಿರುವುದು ಈಗಾಗಲೇ ಬಹಿರಂಗವಾಗಿದೆ. ಕೇಂದ್ರದಲ್ಲಿ ಎನ್‍ಡಿಎ ಅನ್ನು ಮತ್ತೆ ಅಧಿಕಾರಕ್ಕೆ ತರುವುದು ಹಾಗೂ ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಷ್ಟೇ ನಮ್ಮ ಗುರಿ ಎಂದರು. ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ರಾಜೇಂದ್ರ, ಜಿಲ್ಲಾ ಅಧ್ಯಕ್ಷ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಮಾಜಿ ಶಾಸಕ ಸಿ.ಗುರುಸ್ವಾಮಿ, ಮುಖಂಡರಾದ ಸಿ.ಬಸವೇಗೌಡ, ಹನುಮಂತಶೆಟ್ಟಿ, ಚಿನ್ನಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.