ಎಸ್‍ಐಟಿಗೆ ಸಿದ್ದು ಬಿಗಿಪಟ್ಟು: ಹೆಚ್‍ಡಿಕೆ; ಬಿಎಸ್‍ವೈಗೆ ಬಿಕ್ಕಟ್ಟು

ಬೆಂಗಳೂರು: ಧ್ವನಿ ಸುರುಳಿಯ ದಾಳ ಬಳಸಿಕೊಂಡ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಬಿಜೆಪಿ ನಾಯಕ ಬಿ.ಎಸ್.ಯಡಿ ಯೂರಪ್ಪ ಮತ್ತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಬ್ಬರೂ ಬೀದಿ ಕಾಳಗದಲ್ಲಿ ತೊಡಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಆಪರೇಷನ್ ಕಮಲ ಕಾರ್ಯಾಚರಣೆಯ ಧ್ವನಿ ಸುರುಳಿ ಪ್ರಕರಣ ಎಸ್‍ಐಟಿ ತನಿಖೆಗೆ ನೀಡಬಾರದೆಂದು ಕಳೆದ 2 ದಿನಗಳಿಂದ ವಿಧಾನಮಂಡಲದಲ್ಲಿ ನಡೆಸಿದ ಹೋರಾಟಕ್ಕೆ ಸರ್ಕಾರ ಮಣಿದಿಲ್ಲ. ಮುಖ್ಯಮಂತ್ರಿ ಅವರು ಒಂದು ಹಂತದಲ್ಲಿ ಎಸ್‍ಐಟಿ ತನಿಖೆಯಿಂದ ಹಿಂದೆ ಸರಿದು, ಸಭಾಧ್ಯಕ್ಷರು ಹೊಸದಾಗಿ ನೀಡುವ ಆದೇಶಕ್ಕೆ ಸಮ್ಮತಿಸಲು ಮುಂದಾಗಿದ್ದರು. ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್, ಈ ಪ್ರಕರಣವನ್ನು ತಮ್ಮ ಕೊಠಡಿಯಲ್ಲಿ ಬಗೆಹರಿಸಲು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರನ್ನು ಸಭೆಗೆ ಆಹ್ವಾನಿಸಿದ್ದರು. ತೆರೆಮರೆಯಲ್ಲಿ ವಿವಾದ ಬಗೆಹರಿಸಿ ವಿಧಾನಸಭೆ ಕಲಾಪ ನಡೆಸಿಕೊಂಡು ಹೋಗುವ ಉದ್ದೇಶ ಅವರದ್ದಾಗಿತ್ತು, ಜೊತೆಗೆ ಬಿಜೆಪಿಯ ಕೆಲವು ಸದಸ್ಯರ ಮನವಿಗೆ ತಮ್ಮ ರೂಲಿಂಗ್ ಬದಲಿಸುವ ಬಗ್ಗೆಯೂ ಚಿಂತಿಸಿದ್ದರು. ಸಂಧಾನ ಸಭೆ ಆರಂಭವಾಗುತ್ತಿದ್ದಂತೆ, ಸ್ವತಃ ಮುಖ್ಯಮಂತ್ರಿ ಅವರೇ ಮುಂದಾಗಿ, ಇಂತಹುದೇ ತನಿಖೆ ನಡೆಯಬೇಕೆಂಬುದಕ್ಕೆ ನಾನು ಕಟ್ಟುಬಿದ್ದಿಲ್ಲ, ಧ್ವನಿ ಸುರುಳಿ ಅಸ್ತ್ರ ಇಟ್ಟುಕೊಂಡು ರಾಜಕೀಯವಾಗಿ ಯಾರನ್ನೂ ತುಳಿಯಬೇಕು ಎಂದಿಲ್ಲ, ಧೈರ್ಯವಾಗಿ ಎಲ್ಲವನ್ನೂ ಎದುರಿಸುತ್ತೇನೆ ಎಂದರು.

ನೀವು ರೂಲಿಂಗ್ ಅನ್ನು ಮರುಪರಿಶೀಲಿಸಿದರೆ ನನ್ನ ಅಭ್ಯಂತರ ಇಲ್ಲ ಎಂದು ಕುಮಾರ ಸ್ವಾಮಿ ಹೇಳುತ್ತಿದ್ದಂತೆ, ವಿರೋಧ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಆಪರೇಷನ್ ಕಮಲಕ್ಕೆ ಇತಿಶ್ರೀ ಹಾಡಲು ಎಸ್‍ಐಟಿ ತನಿಖೆ ನಡೆಯಲೇಬೇಕು ಎಂದು ಪಟ್ಟು ಹಿಡಿದರು. ತಮ್ಮ ನಾಯಕನ ಬೆಂಬಲಕ್ಕೆ ಸಚಿವ ಕೃಷ್ಣಭೈರೇಗೌಡ ಧ್ವನಿಗೂಡಿಸಿ, ಮುಂದೆ ಅನುಸರಿಸಬೇಕಾ ಗುವ ಕಾನೂನುಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಸಿದ್ದರಾಮಯ್ಯ ಅವರ ಬಿಗಿ ನಿಲುವಿನಿಂದ ಸಂಧಾನಕ್ಕೆ ತೆರಳಿದ್ದ ಬಿಜೆಪಿ ನಾಯಕರು, ಇನ್ನು ವಿಧಾನಸಭೆಯಲ್ಲಿ ಇಂತಹದ್ದೇ ತನಿಖೆ ಆಗಬೇಕೆಂದು ನಾವು ಒತ್ತಾಯಿಸುವುದಿಲ್ಲ, ಆದರೆ ಸರ್ಕಾರದ ನಿರ್ಧಾರವನ್ನು ಪ್ರತಿಭಟಿ ಸುತ್ತೇವೆ. ಎಸ್‍ಐಟಿಗೆ ಹೆದರುವುದಿಲ್ಲ, ನಾವು ಕಾನೂನು ಹೋರಾಟ ನಡೆಸುವುದರ ಜೊತೆಗೆ ಇದನ್ನು ಜನರ ಮುಂದೆ ಕೊಂಡೊಯ್ಯುತ್ತೇವೆ ಎಂದು ಹೇಳಿ ಹೊರನಡೆದರು.

ಇದಕ್ಕೂ ಮುನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮಾತನಾಡಿ, ಧ್ವನಿ ಸುರುಳಿಯನ್ನು ಎಸ್‍ಐಟಿ ಹೊರತುಪಡಿಸಿ ಯಾವ ತನಿಖೆಗೆ ಒಳಪಡಿಸಿದರೂ ಅದರಿಂದ ಗುರಿ ಸಾಧನೆಯಾಗುವುದಿಲ್ಲ. ಅದನ್ನು ಮುಚ್ಚಿ ಹಾಕುವುದು ನಮ್ಮ ಗುರಿಯೋ ಅಥವಾ ಸತ್ಯ ತಿಳಿಯಬೇಕು ಎಂಬುದೋ ಎಂದು ಪ್ರಶ್ನಿಸಿದರು.