ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸದಿದ್ದರೆ ಬೆಳಗಾವಿ ಅಧಿವೇಶನಕ್ಕೆ ಮುತ್ತಿಗೆ

ಮೈಸೂರು,ಜು.21(ಎಂಟಿವೈ)-ಜನ ಸಂಖ್ಯೆಗೆ ಅನುಗುಣವಾಗಿ ಎರಡು ತಿಂಗ ಳೊಳಗೆ ಪರಿಶಿಷ್ಟ ಪಂಗಡಕ್ಕೆ ಶೇ.7.5ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸದಿದ್ದರೆ ಬೆಳಗಾವಿ ಅಧಿವೇಶನಕ್ಕೆ ಮುತ್ತಿಗೆ ಹಾಕು ವುದಾಗಿ ದಾವಣಗೆರೆ ಹರಿಹರದ ಶ್ರೀ ವಾಲ್ಮೀಕಿ ಗುರುಪೀಠ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನ ವಿಜಯನಗರದಲ್ಲಿರುವ ವಾಲ್ಮೀಕಿ ಭವನದಲ್ಲಿ ಭಾನುವಾರ ಮೈಸೂರು ಜಿಲ್ಲಾ ನಾಯಕ ಸಮುದಾ ಯದ ಸಂಘಟನೆಗಳ ಒಕ್ಕೂಟ ಆಯೋ ಜಿಸಿದ್ದ ಮೀಸಲಾತಿ ಹೆಚ್ಚಳ ಕುರಿತಂತೆ ನಾಯಕ ಜನಾಂಗದ ಜಾಗೃತಿ ಸಭೆಯ ನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈಗಾಗಲೇ ಪರಿಶಿಷ್ಟ ಪಂಗಡಕ್ಕೆ ಶೇ.7.5ರಷ್ಟು ಮೀಸಲಾತಿ ಸೌಲಭ್ಯ ನೀಡಿದೆ. ಆದರೆ ರಾಜ್ಯದಲ್ಲಿ ಶೇ.3ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿದಾಗ ಮಾತ್ರ ನಮ್ಮ ಸಮಾಜಕ್ಕೆ ನ್ಯಾಯ ದೊರೆಯುತ್ತದೆ. ನಮ್ಮನ್ನಾಳಿ ರುವ ಸರ್ಕಾರಗಳು ಜನಾಂಗಕ್ಕೆ ನ್ಯಾಯ ದೊರಕಿಸಿಕೊಡುವುದರಲ್ಲಿ ವಿಫಲವಾಗಿವೆ. ಕಳೆದ ಆರು ದಶಕಗಳಿಂದ ಸರ್ಕಾರಗಳು ಮೂಗಿಗೆ ತುಪ್ಪ ಸವರುತ್ತಾ ಬಂದಿವೆ. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿತ್ತು. ಉಪಮುಖ್ಯಮಂತ್ರಿಗಳು ಎರಡು ತಿಂಗಳ ಕಾಲಾವಕಾಶ ಕೋರಿ ದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ರಾಜ್ಯದಲ್ಲಿ ಯಾವುದೇ ಸರ್ಕಾರ ಇರಲಿ ಅಥವಾ ಯಾವುದೇ ಸರ್ಕಾರ ಬರಲಿ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತಿದೆ. ರಾಜ್ಯ ಸರ್ಕಾರಕ್ಕೆ ಮೀಸಲಾತಿಯನ್ನು ಶೇ.7.5ರಷ್ಟು ಹೆಚ್ಚಿಸಲು ಎರಡು ಕಾಲಾ ವಕಾಶ ನೀಡಲಾಗಿದೆ. ಈ ಅವಧಿ ಯೊಳಗೆ ನ್ಯಾಯಯುತವಾದ ಬೇಡಿಕೆ ಯನ್ನು ಈಡೇರಿಸಿ ಮೀಸಲಾತಿ ಹೆಚ್ಚಿಸ ಬೇಕು. ಇಲ್ಲದಿದ್ದರೆ ಬೆಳಗಾವಿಯಲ್ಲಿ ನಡೆ ಯುವ ಅಧಿವೇಶನದ ವೇಳೆ ಮುತ್ತಿಗೆ ಹಾಕುವ ಉಗ್ರ ಹೋರಾಟ ನಡೆಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಸಭೆಯಲ್ಲಿ ಶ್ರೀ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಅಪ್ಪಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ನಿವೃತ್ತ ಜಿಲ್ಲಾಧಿಕಾರಿ ಬಿ.ಬಿ. ಶಿವಪ್ಪ, ನಿವೃತ್ತ ಜೈಲರ್ ವೀರೇಂದ್ರ ಸಿಂಹ, ರಾಜ್ಯ ಎಸ್ಟಿ ನಿಗಮದ ನಿವೃತ್ತ ಎಂಡಿ ಮೃತ್ಯುಂಜಯ, ಚಾಮರಾಜನಗರ ಜಿ.ಪಂ ಮಾಜಿ ಅಧ್ಯಕ್ಷ ಎಂ.ರಾಮ ಚಂದ್ರು, ನಾಯಕ ಸಂಘಟನೆಗಳ ಒಕ್ಕೂ ಟದ ಸಂಚಾಲಕ ಪಡುವಾರಹಳ್ಳಿ ಎಂ. ರಾಮಕೃಷ್ಣ, ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ರಾಜ್ಯಾಧ್ಯಕ್ಷ ದೇವರಾಜ್ ಟಿ.ಕಾಟೂರು, ನಾಯಕ ಜನಾಂಗದ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ದ್ಯಾವಪ್ಪನಾಯಕ, ಶಿವಕುಮಾರಸ್ವಾಮಿ, ಚನ್ನನಾಯಕ, ಪ್ರಭಾಕರ್, ಜನಾಂಗದ ಮುಖಂಡರಾದ ಎಸ್.ಜೆ.ಚೆಲುವರಾಜು, ಜೆ.ವೆಂಕಟೇಶ್, ಟೆನ್ನಿಸ್ ಗೋಪಿ, ಎಂ.ಶಿವಪ್ರಕಾಶ್, ಗೋವಿಂದರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಸ್ವಾಮೀಜಿಯನ್ನು ಹಿನಕಲ್ ರಿಂಗ್‍ರಸ್ತೆಯಿಂದ ತೆರೆದ ವಾಹನದಲ್ಲಿ ವಾಲ್ಮೀಕಿ ಭವನಕ್ಕೆ ಮೆರ ವಣಿಗೆಯಲ್ಲಿ ಕರೆತರಲಾಯಿತು.