ಬೇಸಿಗೆ ಧಗೆ ತಣಿಸಲು ಮೃಗಾಲಯದ ಪ್ರಾಣಿಗಳಿಗೆ ವಿಶೇಷ ಆರೈಕೆ

ಮೈಸೂರು: ಬಿರು ಬೇಸಿಗೆಯಿಂದ ತತ್ತರಿಸುತ್ತಿರುವ ಮೈಸೂರು ಮೃಗಾಲಯದ ಪ್ರಾಣಿ ಸಂಕುಲವನ್ನು ರಕ್ಷಿಸಲು ವಿಶೇಷ ಆರೈಕೆ ಮಾಡಲಾಗುತ್ತಿದೆ. ಬಸವಳಿಯುತ್ತಿರುವ ಪ್ರಾಣಿಗಳನ್ನು ತಂಪಾಗಿಸಲು ನೀರಿನ ಸಿಂಚನ, ಮಂಜುಗಡ್ಡೆ, ಕಲ್ಲಂಗಡಿ ಹಣ್ಣನ್ನು ಪೂರೈಸಲಾಗುತ್ತಿದೆ.

ಬೇಸಿಗೆ ಕಾವು ಮನುಷ್ಯರಷ್ಟೇ ಅಲ್ಲ ಪ್ರಾಣಿ-ಪಕ್ಷಿ ಸಂಕುಲವನ್ನು ದಿಕ್ಕೆಡಿಸುತ್ತಿದೆ. ಮಾನವರು ಬೇಸಿಗೆ ಬೇಗೆಯಿಂದ ಪಾರಾ ಗಲು ಹಲವು ಮಾರ್ಗೋಪಾಯ ಅನುಸರಿ ಸುತ್ತಾರೆ. ಆದರೆ ಪ್ರಾಣಿ-ಪಕ್ಷಿಗಳ ಪಾಡು ಹೇಳತೀರದ್ದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮೃಗಾಲಯದಲ್ಲಿರುವ ಪ್ರಾಣಿಗಳ ಹಿತ ಕಾಪಾಡುವುದಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ತಂಪಾದ ವಾತಾವರಣ ಸೃಷ್ಟಿಸುವುದರೊಂದಿಗೆ ದೇಹದಲ್ಲಿ ನೀರಿನ ಅಂಶ ಹೆಚ್ಚಿಸುವ ಹಣ್ಣನ್ನು ಪ್ರಾಣಿಗಳಿಗೆ ನೀಡ ಲಾಗುತ್ತಿದೆ. ಸೂಕ್ಷ್ಮ ಪ್ರಾಣಿಗಳಾದ ಆನೆ, ಜಿರಾಫೆ, ಕರಡಿ, ಜೀಬ್ರಾ, ಹಿಮಾಲಯನ್ ಕರಡಿ, ಚಿಂಪಾಂಜಿ, ಹುಲಿ, ಚಿರತೆ ಸೇರಿ ದಂತೆ ವಿವಿಧ ಪ್ರಾಣಿಗಳನ್ನು ತಂಪಾಗಿಸು ವುದಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಬೇಸಿಗೆ ನಿರ್ವಹಣೆ ಕಾರ್ಯಕ್ರಮದಡಿ ಪ್ರಾಣಿಗಳಿಗೆ ವಿಶೇಷ ಆರೈಕೆ ಮಾಡಲಾಗು ತ್ತಿದೆ. ಈ ಹಿಂದೆ ನೀಡಲಾಗುತ್ತಿದ್ದ ತಂಪು ದಾಯಕ ಆಹಾರ, ಹಣ್ಣು ಹಂಪಲಿನ ಪ್ರಮಾಣ ಹೆಚ್ಚಿಸಲಾಗುತ್ತಿದೆ. ಆನೆ, ಜಿರಾಫೆ, ಜೀಬ್ರಾ ಸೇರಿದಂತೆ ವಿವಿಧ ಪ್ರಾಣಿಗಳಿಗೆ ಸ್ಪ್ಲಿಂಕರಿಂಗ್ ಮೂಲಕ ನೀರನ್ನು ಚಿಮ್ಮಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪ್ರಾಣಿಗಳಿರುವ ಆವರಣದಲ್ಲಿ ನೀರು ಚಿಮ್ಮುವುದರಿಂದ ಅಲ್ಲಿನ ವಾತಾವರಣ ತಂಪಾಗಿರುತ್ತದೆ. ಅಲ್ಲದೇ ಪ್ರಾಣಿಗಳ ದೇಹದ ಮೇಲೆ ನೀರು ಚಿಮ್ಮುವುದರಿಂದ ಅವುಗಳ ದೇಹದ ಉಷ್ಣತೆ ಕಡಿಮೆಯಾಗಿ ತಂಪಾಗುವುದಕ್ಕೆ ಸಹಕಾರಿಯಾಗಲಿದೆ. ಎಲ್ಲಾ ಅಂಶಗಳನ್ನೂ ಮನಗಂಡು ಅಧಿಕಾರಿಗಳು ಪ್ರಾಣಿಗಳ ದೇಹ ತಣಿಸಲು ವಿವಿಧ ಕ್ರಮ ಕೈಗೊಂಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಮೈಸೂರು ಮೃಗಾಲಯದಲ್ಲಿರುವ ಆನೆಗಳಿಗೆ ಷವರ್ ಬಾತ್ ಹಾಗೂ ಮಡ್‍ಬಾತ್ ವ್ಯವಸ್ಥೆ ಮಾಡಲಾಗಿದೆ. ನೀರಿನ ಪೈಪನ್ನು ಎತ್ತರಕ್ಕೆ ಅಳವಡಿಸಿ ಅದರ ಮೂಲಕ ನೀರು ಜಿನುಗುವಂತೆ ವ್ಯವಸ್ಥೆ ಮಾಡಲಾಗಿದೆ. 15 ಅಡಿ ಎತ್ತರ,30 ಅಡಿ ಅಗಲದಲ್ಲಿ ದೊಡ್ಡ ನೀರಿನ ಪೈಪನ್ನು ಅಳವಡಿಸಿ ಅದರಲ್ಲಿ ರಂಧ್ರಗಳ ಮೂಲಕ ನೀರು ಜಿನುಗುವಂತೆ ಮಾಡಲಾಗಿದೆ. ಬಿಸಿಲಿನ ಝಳಕ್ಕೆ ತತ್ತರಿಸುವ ಆನೆಗಳು ನೀರಿನ ಪೈಪ್ ಅಡಿ ನಿಂತು ದೇಹದ ಉಷ್ಣತೆಯನ್ನು ಕಡಿಮೆ ಮಾಡಿ ಕೊಳ್ಳುತ್ತಿವೆ. ಇದರೊಂದಿಗೆ ಮಣ್ಣಿನ ಸ್ನಾನಕ್ಕಾಗಿ (ಮಡ್‍ಬಾತ್) ವ್ಯವಸ್ಥೆ ಮಾಡಲಾ ಗಿದ್ದು, ಒಂದು ಹೊಂಡ ಕೊರೆದು, ಅದರಲ್ಲಿ ಕೆಸರು ಮಾಡಲಾಗಿದೆ. ಈ ಕೆಸರನ್ನು ಆನೆಗಳು ಮೈಮೇಲೆ ಎರಚಿಕೊಂಡು ಸಂಭ್ರಮಿಸುತ್ತಿವೆ. ಒಟ್ಟಾರೆ ಮೃಗಾಲಯದಲ್ಲಿ ಪ್ರಾಣಿ-ಪಕ್ಷಿಗಳಿಗೆ ಬಿಸಿಲಿನ ಬೇಗೆ ತಣಿಸಲು ಕ್ರಮ ಕೈಗೊಳ್ಳಲಾಗಿದೆ.