ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿಶೇಷ ಪೂಜೆ

ಚಿಕ್ಕಮಗಳೂರು, ಜ.20- ಶಾರದಾಂಬೆ ಸನ್ನಿಧಿ ಶೃಂಗೇರಿಯಲ್ಲಿ 5 ದಿನಗಳಿಂದ ವಾಸ್ತವ್ಯ ಹೂಡಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬ ಮಂಗಳವಾರ ಚಂಡಿಕಾ ಯಾಗ ಪೂರ್ಣಾಹುತಿ ಕೈಂಕರ್ಯದಲ್ಲಿ ಭಾಗಿಯಾಗಲಿದೆ.

ಈ ಸಂಬಂಧ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ, ಮಾಧ್ಯಮಗಳಿಗೆ ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. `ಕುಟುಂಬದ ಶ್ರೇಯೋಭಿವೃದ್ಧಿಗಾಗಿ ಪೂಜೆ ಮಾಡಿಸುತ್ತಿದ್ದೇವೆ’ ಎಂದು ದೇವೇಗೌಡರು ಹೇಳಿದರೆ, ಕುಮಾರಸ್ವಾಮಿಯವರು `ಇದೆಲ್ಲಾ ಮನಃಶಾಂತಿಗಾಗಿ’ ಎಂದಿದ್ದಾರೆ. ಆದರೆ ರಾಜಮಹಾರಾಜರ ಕಾಲದಲ್ಲಿ ಕುಟುಂಬ ಹಾಗೂ ಸೈನ್ಯ ಬಲ ಹೆಚ್ಚಬೇಕೆಂಬ ಸಂಕಲ್ಪದಿಂದ ನಡೆಸುತ್ತಿದ್ದ ಈ ಯಾಗವನ್ನು ಇದೀಗ ದೇವೇಗೌಡರ ಕುಟುಂಬ ಜೆಡಿಎಸ್‍ಗೆ ಶಕ್ತಿ ತುಂಬಲೆಂದು ನೆರವೇರಿಸುತ್ತಿದೆ ಎಂದು ಸಾರ್ವಜನಿಕರು ವಿಶ್ಲೇಷಿಸಿದ್ದಾರೆ.

ಸಹಸ್ರ ಚಂಡಿಕಾ ಯಾಗ ನಡೆಸುತ್ತಿರುವ ದೇವೇಗೌಡ ದಂಪತಿ, 5 ದಿನಗಳಿಂದಲೂ ಬೆಳಿಗ್ಗೆ ಮತ್ತು ಸಂಜೆ ಪೂಜೆಯಲ್ಲಿ ಭಾಗಿಯಾಗುತ್ತಿದ್ದಾರೆ. 10 ಜನ ಋತ್ವಿಜರು, 108 ಪುರೋಹಿತರು ಯಾಗದ ವಿಶೇಷ ಪೂಜೆ ನಡೆಸುತ್ತಿದ್ದಾರೆ. ಯಾಗ ಮಂಗಳವಾರ ಪೂರ್ಣಾಹುತಿಗೊಳ್ಳಲಿರುವ ಹಿನ್ನೆಲೆಯಲ್ಲಿ ಸೋಮವಾರ ಮಾಜಿ ಸಿಎಂ ಕುಮಾರ ಸ್ವಾಮಿ ಪೂಜೆಯಲ್ಲಿ ಭಾಗಿಯಾದರು. ಶೃಂಗೇರಿ ಮಠದ ಕಿರಿಯ ಗುರುಗಳಾದ ವಿಧುಶೇಖರ ಶ್ರೀಗಳು ಸಹ ಭಾಗಿಯಾದರು. ಮಾಜಿ ಸಚಿವ ರೇವಣ್ಣನವರೂ ಬಂದು ಹೋಗಿದ್ದಾರೆ.

ದೇವೇಗೌಡರ ಪತ್ನಿ ಚನ್ನಮ್ಮ ಅವರು, ಶೃಂಗೇರಿ ಮಠದಲ್ಲಿ ಕೆಲಸ ಮಾಡುವ 50ಕ್ಕೂ ಹೆಚ್ಚು ಮುತ್ತೈದೆಯರಿಗೆ ಅರಿಶಿನ-ಕುಂಕುಮ, ಬಳೆ, ಸೀರೆ, ತೆಂಗಿನಕಾಯಿ, ಬಾಳೆಹಣ್ಣು ನೀಡಿ, ಅಕ್ಷತೆ ಹಾಕಿ, ಆಶೀ ರ್ವಾದ ಪಡೆದರು. ನಂತರ ದೇವೇಗೌಡರೂ ಸಹ ಮುತ್ತೈದೆ ಯರು ಕುಳಿತ ಜಾಗಕ್ಕೆ ಬಂದು ನೆಲ ಮುಟ್ಟಿ ನಮಸ್ಕರಿಸಿದರು.