ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಒಂದು ಜನಾಂಗಕ್ಕೆ ಸೀಮಿತವಲ್ಲ

ಮೈಸೂರು, ಜ.18(ಪಿಎಂ)- ಆದಿ ಚುಂಚನಗಿರಿ ಮಠದ ಶ್ರೀಬಾಲ ಗಂಗಾಧರನಾಥ ಸ್ವಾಮೀಜಿಯವರು ಯಾವುದೇ ಒಂದು ಜನಾಂಗಕ್ಕೆ ಸೀಮಿತವಲ್ಲ. ಅವರ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ ಎಂದು ಶಾಸಕ ಎಲ್.ನಾಗೇಂದ್ರ ಸ್ಮರಿಸಿದರು.

ಮೈಸೂರಿನ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ವೃತ್ತದ ಬಳಿ ಮೈಸೂರು ರಕ್ಷಣಾ ವೇದಿಕೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ 75ನೇ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಬಾಲಗಂಗಾಧರನಾಥ ಸ್ವಾಮೀಜಿಯವರ ಸಾಧನೆ ಹಾದಿ ಬಲು ದೊಡ್ಡದು. ಶ್ರೀಗಳು ಹಾಕಿಕೊಟ್ಟ ದಾರಿಯಲ್ಲಿ ಅವರ ಆದರ್ಶ ಗಳನ್ನು ಪಾಲಿಸಿಕೊಂಡು ಕಿರಿಯ ಶ್ರೀಗಳಾದ ನಿರ್ಮಲಾ ನಂದನಾಥ ಸ್ವಾಮೀಜಿಯವರು ಮುನ್ನಡೆಯುತ್ತಿದ್ದಾರೆ ಎಂದು ಹೇಳಿದರು.

ಮೈಸೂರು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಮಾತನಾಡಿ, ಬಾಲಗಂಗಾಧರನಾಥ ಶ್ರೀಗಳು ಕರ್ಮಯೋಗಿ. ಶಿಕ್ಷಣ, ಆರೋಗ್ಯ, ಅನ್ನ ದಾಸೋಹಗಳ ಜೊತೆ ಜೊತೆಗೆ ಅಂಗವಿಕಲರ ಏಳಿಗೆಗಾಗಿಯೂ ದುಡಿದ ಅಂತಃ ಕರಣದ ವ್ಯಕ್ತಿತ್ವದವರು. ಶ್ರೀಗಳು 2001 ರಲ್ಲಿ ಸರ್ಕಾರದ ಸಹಯೋಗದಲ್ಲಿ 5 ಕೋಟಿ ಗಿಡಗಳನ್ನು ನೆಡುವ ಮೂಲಕ ತಮ್ಮ ಪರಿಸರದ ಮೇಲಿನ ಕಳಕಳಿ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಿದರು. ಸಮಾಜದ ನೈತಿಕ ಶಕ್ತಿಯಾಗಿ ಎಲ್ಲರೊಡನೆ ಒಂದಾಗಿ ಬಾಳಬೇಕು, ಒಟ್ಟಾಗಿ ಜನರು ಬದುಕಬೇಕು ಎಂಬ ಕಳಕಳಿ ಅವರಲ್ಲಿತ್ತು. ಶ್ರೀಗಳು ಎಂದೆಂದಿಗೂ ಅಜರಾಮರ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ಬಾಲಗಂಗಾಧರನಾಥ ಶ್ರೀಗಳು ಕರ್ನಾಟಕ ಕಂಡ ಮಹಾಪುರುಷರು. ಶ್ರೀಗಳ ಶ್ರಮದಿಂದ ಆದಿಚುಂಚನಗಿರಿ ಕ್ಷೇತ್ರ ಇಡೀ ದೇಶದಲ್ಲಿ ಗಮನ ಸೆಳೆಯುವಂತಾಯಿತು. ಶ್ರೀಗಳು ಜನಮುಖಿ ಚಿಂತಕರು. ಮಠಗಳು ಇರುವುದು ಮಠಾಧೀಶರಿಗಲ್ಲ, ಜನರಿಗೆ ಎಂಬುವುದು ಅವರ ಆದರ್ಶವಾಗಿತ್ತು. ಶೋಷಿತರು, ದಲಿತರು, ರೈತರು ಸೇರಿದಂತೆ ನೊಂದವರಿಗೆ ಸದಾ ಸ್ಪಂದಿಸುವ ಹಂಬಲವುಳ್ಳವರಾಗಿದ್ದರು ಎಂದರು. ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈ.ಕಾ.ಪ್ರೇಮಕುಮಾರ್, ಉಪಾಧ್ಯಕ್ಷರಾದ ಕುಮಾರ್ ಗೌಡ, ಚರಣ್‍ರಾಜ್, ಪತ್ರಿಕಾ ವಿತರಕರ ಸಂಘದ ಕಾರ್ಯದರ್ಶಿ ರವಿ, ಮುಖಂಡರಾದ ಪ್ರಮೋದ್‍ಗೌಡ, ಸುರೇಶ್‍ಗೌಡ, ಸಾಗರ್ ಕೊಪ್ಪಲ್ ಮತ್ತಿತರರು ಹಾಜರಿದ್ದರು.