ಶ್ರೀಮಲ್ಲೇಶ್ವರ ಸ್ವಾಮಿ ದೇವಸ್ಥಾನ ಲೋಕಾರ್ಪಣೆ

ಅರೇಹಳ್ಳಿ: ಹೋಬಳಿಯ ಕಣಗುಪ್ಪೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಬಳಿ ನೂತನವಾಗಿ ನಿರ್ಮಿಸಿರುವ ಶ್ರೀಮಲ್ಲೇಶ್ವರ ಸ್ವಾಮಿಯ ಮೂರ್ತಿ ಪ್ರತಿಷ್ಠಾಪನ ಹಾಗೂ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮ ಶ್ರೀಮಲ್ಲೇಶ್ವರ ಸ್ವಾಮಿ ಸೇವಾ ಸಮಿತಿಯಿಂದ ನಡೆಯಿತು.

ವಿರೂಪಾಕ್ಷ ಲಿಂಗ ಶಿವಚಾರ್ಯ ಸ್ವಾಮೀಜಿ, ಚನ್ನಮಲ್ಲಿಕಾರ್ಜುನ ಶಿವಚಾರ್ಯ ಸ್ವಾಮೀಜಿ, ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ನೇತೃತ್ವವಹಿಸಿದ್ದರು. ಬೆಳಿಗ್ಗೆ ಕಳಸ ಪೂಜಾ ಕಾರ್ಯಗಳು, ಗಣಪತಿ ಪೂಜೆ, ನಂದಿ, ಪಂಚ ಕಳಸ, ನವಗ್ರಹ, ಮೃತ್ಯುಂಜಯ, ಸಪ್ತ ಸಭಾ ಅಷ್ಟದಿಕ್ಪಾಲಕರು, ದಶದಿಕ್ಪಾಲಕರು, ವಾಸ್ತು, ಅಘೋರ, ನವದುರ್ಗಾ, ಉಮಾ ಮಹೇಶ್ವರ, ಲಕ್ಷ್ಮೀ ನಾರಾಯಣ, ಪರಿವಾರದ ದೇವತೆಗಳಿಗೆ ಪೂಜೆ ಸಲ್ಲಿಸಿ ಪೂರ್ಣಾಹುತಿ ನೀಡಲಾಯಿತು.

ಮಲ್ಲೇಶ್ವರ ಸ್ವಾಮಿ ಅವರಿಗೆ ಅಷ್ಟಬಂಧ ಸಹಿತ ಪ್ರತಿಷ್ಠಾಪನೆ ತರುವಾಯ ಪವಿತ್ರ ಗಂಗಾ ತಟದಲ್ಲಿ 108 ಕುಂಭ ಕಳಸಗಳೊಂದಿಗೆ ಹಾಗೂ ಗೋಪುರ ಕಳಸದೊಂದಿಗೆ ಪೂಜಿಸಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಸ್ವಾಮೀಜಿ ಸಮ್ಮುಖದಲ್ಲಿ ವೀರಗಾಸೆ, ನಂದಿ ಕುಣಿತ, ವಾದ್ಯಗೋಷ್ಠಿ ಸಮೇತವಾಗಿ ದೇವಾಲಯ ಪ್ರವೇಶಿಸಲಾಯಿತು. ಈ ವೇಳೆ ಶಿವಾಚಾರ್ಯ ಸ್ವಾಮೀಜಿ ಆಕಾಶ ಗೋಪುರ ಕಳಸ ಸ್ಥಾಪನೆ ನೆರವೇರಿಸಿದರು.

ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಲೋಕಾರ್ಪಣೆಯ ನಂತರ ಧಾರ್ಮಿಕ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ದೊಡ್ಡಮಠ ಹುಲಿಕೆರೆಯ ವಿರೂಪಾಕ್ಷ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದ ಅವರು, ಭಕ್ತಿ ಎಂದರೆ ಮನಸ್ಸು. ಭಗವಂತನನ್ನು ಮನಸ್ಸಿಟ್ಟು ಭಕ್ತಿಯಿಂದ ಆರಾಧಿಸಿದರೆ ಅನುಗ್ರಹ ನೀಡುತ್ತಾನೆ. ಗುರು- ಹಿರಿಯರು, ತಂದೆ-ತಾಯಿ, ಅತಿಥಿಗಳನ್ನು ಗೌರವಿಸಿದರೆ ಮಾತ್ರ ಭಕ್ತಿಯು ತುಂಬಾ ಮೌಲ್ಯಯುತವಾಗಿರುತ್ತದೆ ಎಂದರು.

ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಕಣಗುಪ್ಪೆ ಎಂಬ ಪುಟ್ಟ ಗ್ರಾಮದಲ್ಲಿ ಭವ್ಯವಾದ ದೇವಸ್ಥಾನ ನಿರ್ಮಾಣ ಮಾಡಿರುವುದು ಸಂತಸ ತಂದಿದೆ. ಬಾಳೆಹೊನ್ನೂರಿನ ಶ್ರೀಮದ್ರಾಂಭಾ ಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅವರ ಆಶಯದಂತೆ 2020 ರಿಂದ ಬೇಲೂರಿ ನಲ್ಲಿ ದಸರಾ ಮಹೋತ್ಸವ ಆಚರಿಸಲು ರೂಪುರೇಷೆಗಳನ್ನು ಸಿದ್ಧಪಡಿಸಿದ್ದು, ಸರ್ವರೂ ತನು ಮನ ಧನಗಳಿಂದ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.

ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ 4 ಪಬ್ಲಿಕ್ ಶಾಲೆಗಳನ್ನು ತೆರೆಯಲಿದ್ದು ಅದರಲ್ಲಿ ಒಂದನ್ನು ಅರೇಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಪ್ರಾರಂಭ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀಮಲ್ಲೇಶ್ವರ ಸ್ವಾಮಿ ಸಮಿತಿಯ ಅಧ್ಯಕ್ಷ ವೀರಭದ್ರ ಶೆಟ್ಟಿ, ಕಾರ್ಯ ದರ್ಶಿ ಕೆ.ಜಿ.ಕುಮಾರ್, ಖಜಾಂಚಿ ದೇವರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳ, ಜಿಲ್ಲಾ ಪಂಚಾಯಿತಿ ಸದಸ್ಯೆ ರತ್ನಮ್ಮ, ಮುಖಂಡರಾದÀ ಜಯರಾಮ್ ಶೆಟ್ಟಿ, ಬಿ.ಎಂ.ಶರತ್, ಗೋಪಾಲ ಶೆಟ್ರು, ತಿಮ್ಮೆಗೌಡ್ರು, ಬಿ.ಐ.ನಟರಾಜ್, ಗಂಗಪ್ಪ ಶೆಟ್ರು ಹಾಜರಿದ್ದರು.