ಜ.19ರಂದು ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ  ಸ್ವಾಮೀಜಿಯವರ `ಭಾವ ಪುಷ್ಪಾಂಜಲಿ’ ಬೃಹತ್ ಕಾರ್ಯಕ್ರಮ

ಮೈಸೂರು, ಜ.16(ಪಿಎಂ)-ಇತ್ತೀಚೆಗಷ್ಟೆ ಕೃಷ್ಣೈಕ್ಯ ರಾದ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಪುಣ್ಯಸ್ಮರಣೆ ಅಂಗವಾಗಿ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯರ ಸ್ಮರಣಾ ಕಾರ್ಯ ಕ್ರಮ ಏರ್ಪಡಿಸಿದ್ದು, `ಪೇಜಾವರಶ್ರೀ ಭಾವ ಪುಷ್ಪಾಂ ಜಲಿ’ ಶೀರ್ಷಿಕೆಯಡಿ ಜ.19ರಂದು ಈ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಡೆ ದಾಡುವ ಕೃಷ್ಣರಂತಿದ್ದ ವಿಶ್ವೇಶತೀರ್ಥರು ನಾಡಿನಲ್ಲಿ ಮಾತ್ರವಲ್ಲದೆ, ದೇಶ-ವಿದೇಶದಲ್ಲಿ ಭಕ್ತ ವೃಂದ ಹೊಂದಿ ದ್ದಾರೆ. ಅವರು ಎಂದೂ ಕೇವಲ ಒಂದು ವರ್ಗಕ್ಕೆ ಸೀಮಿತವಾಗಿರಲಿಲ್ಲ. ಅವರ ಸ್ಮರಣಾರ್ಥವಾಗಿ ಮೈಸೂರಿನ ಅವಧೂತ ದತ್ತಪೀಠದ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಅಂದು ಸಂಜೆ 4ಕ್ಕೆ ಭಾವ ಪುಷ್ಪಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ಇದು ಶ್ರೀಗಳ ಸ್ಮರಣಾರ್ಥ ಏರ್ಪಡಿಸಿರುವ ಬೃಹತ್ ಕಾರ್ಯಕ್ರಮವಾಗಿದ್ದು, ಹಲವು ಸಂಘ ಟನೆಗಳು ಹಾಗೂ ನಾಗರಿಕರು ಈ ಕಾರ್ಯಕ್ರಮ ಆಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾರ್ಯ ಕ್ರಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮನಾಥಾನಂದ ಸ್ವಾಮೀಜಿ, ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಶ್ರೀ ಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಚಿತ್ರದುರ್ಗದ ಶರಣ ಮಾದಾರ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹಾಗೂ ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿ ದಾನಂದಜೀ ಸಾನಿಧ್ಯ ವಹಿಸಲಿದ್ದಾರೆ ಎಂದರು.

ವಿಶ್ವೇಶತೀರ್ಥ ಶ್ರೀಗಳು ಸಮಾಜದ ಸಾಮರಸ್ಯಕ್ಕೆ ಹೆಚ್ಚು ಒತ್ತು ನೀಡಿದ್ದರು. ಮೈಸೂರು ಅವರ ನೆಚ್ಚಿನ ತಾಣವಾಗಿತ್ತು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ಪಂದಿಸಬೇಕೆಂಬ ನಿಲುವು ತಾಳಿದ್ದ ಅವರು ಅನೇಕ ಸಂದರ್ಭದಲ್ಲಿ ಸಮಾಜದ ಸಾಮರಸ್ಯಕ್ಕಾಗಿ ಉಪ ವಾಸ ವ್ರತ ಮಾಡಿದ್ದಾರೆ. ಮೈಸೂರಿನಲ್ಲಿ ಚಾತು ರ್ಮಾಸ್ಯ ನಡೆಸಿದಾಗ ಪೌರಕಾರ್ಮಿಕರ ಮನೆಗಳಿಗೆ ಭೇಟಿ ನೀಡಿ ಪೂಜಾ ಕೈಂಕರ್ಯ ನಡೆಸಿದ್ದರು. ಮೈಸೂರಿನ ಕಾರಾಗೃಹದಲ್ಲೂ ಕೈದಿಗಳ ಮನಪರಿ ವರ್ತನೆಗಾಗಿ ಅನೇಕ ಕಾರ್ಯಕ್ರಮಗಳನ್ನು ಶ್ರೀಗಳು ನಡೆಸಿದ್ದರು ಎಂದು ಸ್ಮರಿಸಿದರು.

ವಿಜಯ ವಿಠ್ಠಲ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ವಾಸುದೇವ ಭಟ್ ಮಾತನಾಡಿ, ವಿಶ್ವೇಶತೀರ್ಥ ಶ್ರೀಗಳಿಗೆ ಉಡುಪಿ ಬಿಟ್ಟರೆ, ಬೆಂಗಳೂರು ಅವರ ಕಾರ್ಯಕ್ಷೇತ್ರವಾಗಿತ್ತು. ಜೊತೆಗೆ ಮೈಸೂರು ಅವರಿಗೆ ಪ್ರೀತಿಯ ತಾಣವಾಗಿತ್ತು. ಹೀಗಾಗಿ ಹತ್ತು ಹಲವು ಯೋಜನೆಗಳು ಹಾಗೂ ಸೇವಾ ಕಾರ್ಯಗಳನ್ನು ಅವರು ಮೈಸೂರಿಗೆ ಕೊಡುಗೆಯಾಗಿ ನೀಡಿದ್ದಾರೆ. ಎಲ್ಲಾ ವರ್ಗಗಳಲ್ಲೂ ಅವರಿಗೆ ಅಪಾರ ಭಕ್ತ ವೃಂದವಿದೆ ಎಂದು ತಿಳಿಸಿದರು.

ಭಾವ ಪುಷ್ಪಾಂಜಲಿ ಕಾರ್ಯಕ್ರಮದಲ್ಲಿ ಮೊದಲಿಗೆ ರಘುಲೀಲಾ ಸಂಗೀತ ಶಾಲೆ ಗಾಯಕರು ಭಕ್ತಿ ಸಂಗೀತ ಸಾದರಪಡಿಸಲಿದ್ದಾರೆ. ಬಳಿಕ ವಿವಿಧ ಮಠಾಧೀಶರು ವಿಶ್ವೇಶತೀರ್ಥ ಶ್ರೀಗಳ ಕುರಿತು ಮಾತನಾಡಲಿ ದ್ದಾರೆ. ವಿಶ್ವೇಶತೀರ್ಥ ಸ್ವಾಮೀಜಿಯವರ ಜೀವನ ಚರಿತ್ರೆ, ಸಾಧನೆ ಹಾಗೂ ಕೊಡುಗೆಗಳ ಕುರಿತಂತೆ ಹೊರತಂದಿರುವ ಕಿರುಪುಸ್ತಕ ಹಾಗೂ ಶ್ರೀಗಳ ಭಾವ ಚಿತ್ರವಿರುವ ಕಾರ್ಡ್‍ಗಳನ್ನು ವಿತರಣೆ ಮಾಡಲಾಗು ವುದು ಎಂದರು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹೆಚ್.ವಿ.ರಾಜೀವ್, ಜಿಎಸ್‍ಎಸ್ ಫೌಂಡೇಶನ್ ಅಧ್ಯಕ್ಷ ಶ್ರೀಹರಿ, ಕೃಷ್ಣಮಿತ್ರ ಮಂಡಳಿ ಅಧ್ಯಕ್ಷ ರವಿಶಾಸ್ತ್ರಿ, ಮುಖಂಡ ಪುರಾಣಿಕ್ ಗೋಷ್ಠಿಯಲ್ಲಿದ್ದರು.

ಮೇಯರ್ ಸ್ಥಾನ ಹಿಡಿಯಲು ಬಿಜೆಪಿ ಪ್ರಯತ್ನಿಸುತ್ತಿಲ್ಲ ಶಾಸಕ ಎಸ್.ಎ.ರಾಮದಾಸ್
ಮೈಸೂರು,ಜ.16(ಪಿಎಂ)-ಮೈಸೂರು ಮಹಾ ನಗರಪಾಲಿಕೆ ಮೇಯರ್ ಸ್ಥಾನ ಹಿಡಿಯಲು ಬಿಜೆಪಿ ಪ್ರಯತ್ನಿಸುತ್ತಿಲ್ಲ. ಆಪರೇಷನ್ ಕಮಲ ಮಾಡು ತ್ತಾರೆ ಎಂಬುದರಲ್ಲಿ ಯಾವುದೇ ಹುರುಳಿಲ್ಲ. ಏನೋ ಭಯವಿರಬಹುದಾದ ಕಾರಣಕ್ಕೆ ಕಾಂಗ್ರೆಸ್-ಜೆಡಿಎಸ್‍ನವರು ರೆಸಾರ್ಟ್ ನತ್ತ ಮುಖ ಮಾಡಿರಬೇಕು ಎಂದು ಶಾಸಕ ಎಸ್.ಎ. ರಾಮದಾಸ್ ಪ್ರತಿಕ್ರಿಯಿಸಿದರು.

ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಗುರು ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಯಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಗಳಿಸಿದ ಏಕೈಕ ಪಕ್ಷ. ಆದರೆ ಯಾವುದೇ ಒಂದು ಪಕ್ಷಕ್ಕೆ ಬಹುಮತವಿಲ್ಲದೆ, ಎರಡು ಪಕ್ಷಗಳು ಒಂದಾಗ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಮೇಯರ್ ಗಾದಿ ಹಿಡಿಯಲು ನಾವು ಯಾವತ್ತು ಹಿಂಬಾಗಿ ಲಿಂದ ಪ್ರಯತ್ನ ಮಾಡಿಲ್ಲ. ಈಗಲೂ ಮಾಡುವು ದಿಲ್ಲ. ಬಿಜೆಪಿ ಮೈಸೂರು ಪಾಲಿಕೆಯಲ್ಲಿ ವಿರೋಧ ಪಕ್ಷವಾಗಿಯೇ ಕೆಲಸ ಮಾಡಲಿದ್ದು, ಜ.17ರಂದು ನಮ್ಮ ಮುಂದಿನ ನಡೆ ಕುರಿತು ಸಭೆ ನಡೆಸಿ ನಿರ್ಧರಿಸಲಾಗುವುದು ಎಂದು ಹೇಳಿದರು.

ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಯಾವುದೇ ಕಗ್ಗಂಟಿಲ್ಲ. ಸಂಪುಟ ರಚನೆ ವೇಳೆ ಸ್ಪರ್ಧೆ ಇರು ವುದು ಸಾಮಾನ್ಯ. ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿ ಗಳು ಹೇಳಿಕೆ ನೀಡುವುದನ್ನು ತಪ್ಪು ಎನ್ನಲಾಗದು. ಈ ಹಿಂದಿನ ಸಂದರ್ಭದಲ್ಲಿ ಅಂತಿಮ ಕ್ಷಣದಲ್ಲಿ ಪಟ್ಟಿಯಲ್ಲಿ ಹೆಸರಿಲ್ಲ ಎಂದಿದ್ದರು. ಆಗಲೂ ನಾನು ಆಕಾಂಕ್ಷಿಯಾಗಿರಲಿಲ್ಲ. ಈಗಲೂ ಆಕಾಂಕ್ಷಿಯಲ್ಲ. ವರಿಷ್ಠರ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ ಎಂದರು.

ಎ.ಹೆಚ್.ವಿಶ್ವನಾಥ್ ಸಚಿವ ಸಂಪುಟ ವಿಸ್ತರಣೆ ವೇಳೆ ಉಪಚುನಾವಣೆಯಲ್ಲಿ ಸೋತವರಿಗೂ ಸ್ಥಾನ ನೀಡಬೇಕೆಂದು ಪರೋಕ್ಷ ಎಚ್ಚರಿಕೆ ನೀಡಿದ್ದಾರೆ ಎಂಬುದರ ಕುರಿತಂತೆ ಪ್ರತಿಕ್ರಿಯಿಸಿದ ರಾಮದಾಸ್, ವಿಶ್ವನಾಥ್ ಹಿರಿಯರು. ಅವರು ಯಾವ ಅರ್ಥ ದಲ್ಲಿ ಹೇಳಿದ್ದರೋ ಗೊತ್ತಿಲ್ಲ. ಅವರು ಪ್ರತಿಪಕ್ಷಗಳ ಆಡಳಿತ ವ್ಯವಸ್ಥೆಗಳನ್ನು ತಿಳಿದುಕೊಂಡಿದ್ದಾರೆ. ನಮ್ಮ ಪಕ್ಷದ ಅಡಿಪಾಯ ದೊಡ್ಡದಿದ್ದು, ಎಲ್ಲರ ಮನ ವೊಲಿಸುವ ಶಕ್ತಿ ಹೊಂದಿದೆ. ಬಿಜೆಪಿಯಂತಹ ಹಾಲಿನ ವಾತಾವರಣದಲ್ಲಿ ವಿಶ್ವನಾಥ್ ಸಕ್ಕರೆ ಯಂತೆ ಕರಗಿ ನಮ್ಮ ಜೊತೆ ಇರುತ್ತಾರೆ ಎಂದರು.