ಅಪಘಾತದಿಂದ ನೋವು-ಸುರಕ್ಷತೆಯಿಂದ ನಲಿವು

ಮೈಸೂರು, ಜ.11(ಆರ್‍ಕೆ)- `ಅಪಘಾತ ದಿಂದ ನೋವು-ಸುರಕ್ಷತೆಯಿಂದ ನಲಿವು’ ಘೋಷಣೆಯೊಂದಿಗೆ ಮೈಸೂರಿನಲ್ಲಿ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2020 ಇಂದಿನಿಂದ ಆರಂಭವಾಯಿತು.

ಮೈಸೂರು ನಗರ ಪೊಲೀಸ್ ಮತ್ತು ನಗರ ಸಂಚಾರ ಪೊಲೀಸ್ ಆಶ್ರಯದಲ್ಲಿ ಮೈಸೂರು ಅರಮನೆ ಬಲರಾಮ ದ್ವಾರದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವ ಸ್ಥಾನದ ಬಳಿ ಏರ್ಪಡಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ವನ್ನು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಮನುಷ್ಯನ ಜೀವಕ್ಕಿಂತ ಮುಖ್ಯವಾದುದು ಬೇರೇನೂ ಇಲ್ಲ. ಅತ್ಯಮೂಲ್ಯವಾದ ಪ್ರಾಣ ಸಂರಕ್ಷಣೆಗೆ ಪ್ರತಿಯೊಬ್ಬ ವಾಹನ ಚಾಲ ಕನೂ ಸಂಚಾರ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸಲಹೆ ನೀಡಿದರು.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು, ಸುಸ್ಥಿತಿಯಲ್ಲಿರದ ವಾಹನ ಬಳಕೆ, ಮೊಬೈಲ್ ಫೋನ್‍ನಲ್ಲಿ ಮಾತ ನಾಡಿಕೊಂಡು ಚಾಲನೆ ಮಾಡುವುದು, ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸದೆ ವಾಹನ ಚಾಲನೆಯಿಂದಾಗಿ ಅಪಘಾತಗಳು ಸಂಭ ವಿಸುತ್ತವೆ. ಅದರಿಂದ ಸಾವು-ನೋವು ಉಂಟಾಗಿ ಬದುಕು ನಾಶವಾಗುತ್ತದೆ ಎಂದು ಅವರು ತಿಳಿಸಿದರು.

ನಿರ್ಲಕ್ಷ್ಯತೆ, ಅತಿವೇಗದ ಚಾಲನೆಯೂ ಅಪಘಾತಕ್ಕೆ ಕಾರಣವಾಗುತ್ತದೆ. ನಾವು ಮಾಡುವ ತಪ್ಪಿನಿಂದಾಗಿ ಉಂಟಾಗುವ ಅಪಘಾತದಲ್ಲಿ ನಮಗಷ್ಟೇ ಅಲ್ಲ, ತಪ್ಪು ಮಾಡದ ಮುಗ್ದ ಜನರಿಗೂ ತೊಂದರೆ ಯಾಗುತ್ತದೆ ಎಂಬುದನ್ನು ಮರೆಯಬಾರದು ಎಂದೂ ಪೊಲೀಸ್ ಆಯುಕ್ತ ಬಾಲಕೃಷ್ಣ ಕಿವಿಮಾತು ಹೇಳಿದರು.

ಸುರಕ್ಷತೆಗಾಗಿ ಸಂಚಾರ ನಿಯಮ ಗಳನ್ನು ಪಾಲಿಸಿ, ಇತರರಿಗೂ ಅರಿವು ಮೂಡಿಸಿ. ಶಾಲಾ-ಕಾಲೇಜುಗಳಲ್ಲಿಯೂ ಈ ಸಂಬಂಧ ವ್ಯಾಪಕ ಜಾಗೃತಿ ಮೂಡಿ ಸುವುದು ಅತ್ಯಗತ್ಯವಾಗಿದ್ದು, ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಮೈಸೂರು ನಗರದ ಎಲ್ಲಾ ಸಂಚಾರ ಠಾಣಾ ವ್ಯಾಪ್ತಿ ಯಲ್ಲಿ ಜಾಥಾ ಮಾಡುವ ಮೂಲಕ ರಸ್ತೆ ಬಳಕೆದಾರರಿಗೆ ತಿಳುವಳಿಕೆ ಮೂಡಿಸ ಲಾಗುವುದು ಎಂದು ನುಡಿದರು.

ಡಿಸಿಪಿಗಳಾದ ಎಂ.ಮುತ್ತುರಾಜ್, ಬಿ.ಟಿ. ಕವಿತಾ, ಸಂಚಾರ ವಿಭಾಗದ ಎಸಿಪಿ ಎಸ್.ಎನ್ ಸಂದೇಶ್‍ಕುಮಾರ್, ದೇವ ರಾಜ, ಉಪವಿಭಾಗದ ಎಸಿಪಿ ಶಶಿಧರ, ಎನ್.ಆರ್ ಉಪವಿಭಾಗದ ಎಸಿಪಿ ಶಿವ ಶಂಕರ್, ಸಂಚಾರ ಠಾಣೆಗಳ ಇನ್‍ಸ್ಪೆಕ್ಟರ್ ಗಳಾದ ಜಗದೀಶ, ಬಸವರಾಜು, ಬಿ.ಜಿ. ಪ್ರಕಾಶ ಸೇರಿದಂತೆ ಹಲವು ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೈಸೂರಿನ 20 ವಿವಿಧ ಶಾಲೆಗಳಿಂದ ಸುಮಾರು 1000 ವಿದ್ಯಾರ್ಥಿಗಳು, ಶಿಕ್ಷ ಕರು, ಸಪ್ತಾಹದಲ್ಲಿ ಭಾಗವಹಿಸಿ ರಸ್ತೆ ಸುರ ಕ್ಷತೆ ಸಂಬಂಧ ನಿಯಮ ಪಾಲಿಸುವು ದಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.