ನಾಳೆ ನಗರದಲ್ಲಿ ಕೇಂದ್ರಿಯ ವಿದ್ಯಾಲಯ ಲೋಕಾರ್ಪಣೆ

ಚಾಮರಾಜನಗರ: ತಾಲೂಕಿನ ಮಾದಾಪುರ ಗ್ರಾಮದ ಬಳಿ 16 ಕೋಟಿ ರೂ. ವೆಚ್ಚದಡಿ ನಿರ್ಮಾಣ ಮಾಡಿರುವ ಕೇಂದ್ರಿಯ ವಿದ್ಯಾಲಯ ಆ. 13ರ ಮಧ್ಯಾಹ್ನ 12 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.

ಉದ್ಘಾಟನೆ ಸಂಪೂರ್ಣ ಸಜ್ಜುಗೊಂಡಿರುವ ಕೇಂದ್ರಿಯ ವಿದ್ಯಾಲಯ ಕಟ್ಟಡ ವನ್ನು ಪರಿಶೀಲಿಸಿದ ನಂತರ ಕೇಂದ್ರ ದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಸಂಸದ ಆರ್.ಧ್ರುವನಾರಾಯಣ ಈ ಬಗ್ಗೆ ಮಾಹಿತಿ ನೀಡಿದರು.

ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂಸತ್ತಿನ ವ್ಯವಹಾರಗಳ ಕೇಂದ್ರ ಸಚಿವ ಅನಂತ್‍ಕುಮಾರ್ ನೂತನ ಶಾಲಾ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗ ಶೆಟ್ಟಿ, ಶಿಕ್ಷಣ ಸಚಿವ ಎನ್.ಮಹೇಶ್, ಶಾಸಕರಾದ ಆರ್.ನರೇಂದ್ರ, ಸಿ.ಎಸ್.ನಿರಂಜನ್‍ಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿ ದ್ದಾರೆ ಎಂದರು.

ಚಾಮರಾಜನಗರದಲ್ಲಿ 2013ರಲ್ಲಿ ಕೇಂದ್ರಿಯ ವಿದ್ಯಾಲಯ ಮಂಜೂರು ಆಯಿತು. 2014ರಿಂದ ನಗರದ ರೇಷ್ಮೆ ಇಲಾಖೆಗೆ ಸೇರಿದ ಕಟ್ಟಡದಲ್ಲಿ ಶಾಲೆಯನ್ನು ತಾತ್ಕಾಲಿಕವಾಗಿ ಆರಂಭಿಸಲಾಗಿತ್ತು. ಮಾದಾಪುರದ ಬಳಿ ಇದ್ದ 7.5 ಎಕರೆ ಸರ್ಕಾರಿ ಜಾಗವನ್ನು ಗುರುತಿಸಿ 16 ಕೋಟಿ ರೂ. ವೆಚ್ಚದಡಿ ಭವ್ಯವಾದ ಶಾಲಾ ಕಟ್ಟಡ, ಪ್ರಾಂಶು ಪಾಲರು ಹಾಗೂ 9 ಶಿಕ್ಷಕರ ವಸತಿ ಗೃಹಗ ಳನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ. ಶಾಲೆ ಉದ್ಘಾಟನೆಗೊಂಡ ಒಂದೆರಡು ದಿನ ಗಳಲ್ಲಿಯೇ ನೂತನ ಕಟ್ಟಡದಲ್ಲಿ ತರಗತಿಗಳು ಆರಂಭವಾಗಲಿವೆಎಂದು ತಿಳಿಸಿದರು.

ಕೇಂದ್ರಿಯ ವಿದ್ಯಾಲಯದ ಒಂದನೇ ತರಗತಿಗೆ 40 ವಿದ್ಯಾರ್ಥಿಗಳಿಗೆ ಮಾತ್ರ ಇದು ವರೆವಿಗೆ ಪ್ರತಿ ವರ್ಷ ಪ್ರವೇಶಾತಿಗೆ ಅನುಮತಿ ನೀಡಲಾಗಿತ್ತು. ಈಗ ಹೊಸ ಕಟ್ಟಡ ನಿರ್ಮಾಣ ಆಗಿದ್ದು, ಪ್ರತಿ ತರಗತಿಗೆ ಎರಡು ಕೊಠಡಿಗಳು ಮೀಸಲಿರುವ ಕಾರಣ ಮುಂದಿನ ಶೈಕ್ಷಣಿಕ ವರ್ಷದಿಂದ 80 ವಿದ್ಯಾರ್ಥಿ ಗಳಿಗೆ ಪ್ರವೇಶ ನೀಡಲಾಗುವುದು. ಗುಣ ಮಟ್ಟದ ಶಿಕ್ಷಣಕ್ಕೆ ಹೆಸರುವಾಸಿ ಆಗಿರುವ ಕೇಂದ್ರಿಯ ವಿದ್ಯಾಲಯಕ್ಕೆ ನೂತನ ಕಟ್ಟಡ ಹಾಗೂ ಸುಸಜ್ಜಿತವಾದ ಆಟದ ಮೈದಾನ ಇರುವುದರಿಂದ ವಿದ್ಯಾರ್ಥಿಗಳಿಗೆ ಅನು ಕೂಲ ಆಗಲಿದೆ ಎಂದರು.

ದೇಶದಲ್ಲಿ 1,159 ಕೇಂದ್ರಿಯ ವಿದ್ಯಾಲಯಗಳು ಇವೆ. ರಾಜ್ಯದಲ್ಲಿ 46 ವಿದ್ಯಾಲಯ ಗಳಿದ್ದು, ಅದರಲ್ಲಿ ಬೆಂಗಳೂರಿನಲ್ಲಿ 13, ಬೆಳಗಾಂನಲ್ಲಿ 4, ಬಳ್ಳಾರಿಯಲ್ಲಿ 2 ಸೇರಿ ದಂತೆ ಇನ್ನೂ ಕೆಲ ಜಿಲ್ಲೆಗಳಲ್ಲಿ 1 ವಿದ್ಯಾಲಯಗಳಿವೆ. ಕೆಲವು ಜಿಲ್ಲೆಗಳಿಗೆ ಕೇಂದ್ರಿಯ ವಿದ್ಯಾಲಯವೇ ಮಂಜೂರಾಗಿಲ್ಲ. ಅಂತಹದ ರಲ್ಲಿ ಗಡಿ ಜಿಲ್ಲೆಯಾದ ಚಾಮರಾಜನಗರಕ್ಕೆ ಶಾಲೆ ಮಂಜೂರಾಗಿ, ಸ್ವಂತ ಕಟ್ಟಡ ಹೊಂದು ತ್ತಿರುವುದು ಜಿಲ್ಲೆಯ ಅಭಿವೃದ್ಧಿಯಲ್ಲಿ ಸಕ್ರಿಯ ಪಾತ್ರ ವಹಿಸಲಿದೆ ಎಂದರು.

ಮಾದಾಪುರ ಮುಖ್ಯ ರಸ್ತೆಯಿಂದ ಶಾಲೆವರೆಗೆ ಕಾಂಕ್ರಿಟ್ ರಸ್ತೆ ನಿರ್ಮಿಸಲಾ ಗಿದೆ. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಪರಿಸರವಾದಿ ಆರ್.ವೆಂಕಟೇಶ್ ಅವರು ರಸ್ತೆಯ ಎರಡು ಬದಿಗಳಲ್ಲಿ ಗಿಡಗಳನ್ನು ನೆಟ್ಟಿದ್ದಾರೆ. ಶಾಲೆಗೂ ವಸತಿ ಗೃಹಗಳ ಕ್ಯಾಂಪಸ್‍ನಲ್ಲಿ ಗುತ್ತಿಗೆದಾರ ಸ್ವಾಮಿ ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ. ಹೀಗಾಗಿ ಉತ್ತಮ ವಾತಾವರಣದಲ್ಲಿ ಶಾಲಾ ಕಟ್ಟಡ ನಿರ್ಮಾಣ ಆಗಿದೆ.

ಕಟ್ಟಡ ಉದ್ಘಾಟನೆಗೊಂಡ ದಿನವೇ ಹಸ್ತಾಂತರ ಆಗಲಿದೆ. ಒಂದೆರಡು ದಿನ ದಲ್ಲಿಯೇ ಹೊಸ ಕಟ್ಟಡ ತರಗತಿಗಳು ಆರಂಭವಾಗಲಿದೆ ಎಂದರು.

ಕೇಂದ್ರಿಯ ವಿದ್ಯಾಲಯ ಪ್ರಾಂಶುಪಾಲ ಡಿ.ಕೆ.ಮಿತ್ರಾ, ಎಪಿಎಂಸಿ ಅಧ್ಯಕ್ಷ ಬಿ.ಕೆ. ರವಿಕುಮಾರ್, ಪತ್ರಿಕಾ ಕಾರ್ಯದರ್ಶಿ ಅರುಣ್‍ಕುಮಾರ್, ಕೆಪಿಸಿಸಿ ಸದಸ್ಯ ಅಕ್ಬರ್ ಅಲಿ, ಹೆಚ್‍ಎಸ್‍ಸಿಎಲ್ ಕಂಪ ನಿಯ ಇಂಜಿನಿಯರ್ ಅನುಪಮ, ಗುತ್ತಿಗೆ ದಾರ ಸ್ವಾಮಿ ಹಾಜರಿದ್ದರು.

ಜಿಲ್ಲಾ ಕೇಂದ್ರವಾದ ಚಾಮರಾಜನಗರಕ್ಕೆ ಕೇಂದ್ರಿಯ ವಿದ್ಯಾಲಯ 2013ರಲ್ಲಿ ಮಂಜುರಾಗಿತ್ತು. ರೇಷ್ಮೆ ಇಲಾಖೆಗೆ ಸೇರಿದ 1 ರಿಂದ 9ನೇ ತರಗತಿವರೆಗೆ ತರಗತಿಗಳು ನಡೆಯುತ್ತಿದ್ದು, ದ್ವಿತೀಯ ಪಿಯುಸಿವರೆಗೂ ವ್ಯಾಸಂಗ ಮಾಡಲು ಅವಕಾಶ ಇದೆ. ಈಗ ವಿದ್ಯಾಲಯದ ಸ್ವಂತ ಕಟ್ಟಡ ನಿರ್ಮಾಣ ಆಗಿರುವುದು ಸಂತಸ ತರಿಸಿದೆ. – ಆರ್.ಧ್ರುವನಾರಾಯಣ, ಸಂಸದ

ವಿಶೇಷತೆ

  • ಮುಂದಿನ ಶೈಕ್ಷಣಿಕ ವರ್ಷದಿಂದ 80 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ
  • ಒಂದನೇ ತರಗತಿಯಿಂದ ರಿಂದ ದ್ವಿತೀಯ ಪಿಯುಸಿವರೆಗೆ ಶಿಕ್ಷಣ
  • 7.5 ಎಕರೆ ಪ್ರದೇಶದಲ್ಲಿ ಶಾಲಾ ಕಟ್ಟಡ, ಆಟದ ಮೈದಾನ ನಿರ್ಮಾಣ
  • ಪ್ರಾಂಶುಪಾಲರು ಹಾಗೂ 9 ಶಿಕ್ಷಕರ ವಸತಿ ಗೃಹ ನಿರ್ಮಾಣ
  • ಪ್ರತಿ ತರಗತಿಗೆ 2 ಕೊಠಡಿ ಮೀಸಲು