ರಾಜ್ಯ ಬಿಜೆಪಿ ನೂತನ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಪದಗ್ರಹಣ

ಬೆಂಗಳೂರು, ಆ. 27(ಕೆಎಂಶಿ)- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲುವಂತೆ ಮಾಡು ವುದೇ ಮುಂದಿನ ಗುರಿ ಎಂದು ಪಕ್ಷದ ನೂತನ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಇಂದಿಲ್ಲಿ ತಿಳಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿಂದು ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಬಲಿಷ್ಠವಾಗಿದೆ, ಅದನ್ನು ಇನ್ನಷ್ಟು ಬಲಿಷ್ಠಗೊಳಿಸುವುದು ತಮ್ಮ ಆದ್ಯತೆ ಎಂದರು. ಸಂಘದ ವಿಚಾರಧಾರೆಗಳನ್ನು ಅಳವಡಿಸಿ ಕೊಂಡು ಬೆಳೆದಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಎಲ್ಲರ ಸಹಕಾರವೂ ಇದೆ.

ಹಲವು ನಾಯಕರ ಪರಿಶ್ರಮದಿಂದ ಪಕ್ಷ ಈ ಮಟ್ಟಕ್ಕೆ ಬೆಳೆದಿದೆ, ಅವರ ಶ್ರಮ ಸಾರ್ಥಕವಾಗುವಂತೆ ದುಡಿಯುತ್ತೇನೆ. ರಾಜ್ಯ ಸರ್ಕಾರದಲ್ಲಿ ಭಿನ್ನಮತ ಇದೆ ಎಂಬುದು ಮಾಧ್ಯಮಗಳ ಕಲ್ಪನೆ, ಆಡಳಿತ ಯಂತ್ರ ಸುಗಮವಾಗಿ ನಡೆಯಲಿದೆ, ಇದರಲ್ಲಿ ಯಾವ ಅನುಮಾನವೂ ಬೇಡ. ಪಕ್ಷ ಬೆಳೆಸುವ ವಿಷಯದಲ್ಲಿ ಎಲ್ಲರ ಸಹಕಾರವಿದೆ, ತಮ್ಮನ್ನು ಟೀಕಿಸುವವರ ಟೀಕೆಯನ್ನೂ ಸಕಾರಾತ್ಮಕವಾಗಿ ಪರಿಗಣಿಸುವೆ ಎಂದರು.

ಇಂದು ಮೈಸೂರು ಭೇಟಿ: ನಳಿನ್ ಕುಮಾರ್ ಕಟೀಲ್ ಅವರು ಬುಧವಾರ ಮೈಸೂರಿಗೆ ಆಗಮಿಸಲಿದ್ದು, ಸಂಜೆ 6 ಗಂಟೆಗೆ ಮೈಸೂರು-ಬೆಂಗಳೂರು ಹೆದ್ದಾರಿ ಏಟ್ರಿಯಂ ಹೋಟೆಲ್ ಬಳಿ ಕಾರ್ಯಕರ್ತರು, ಬೆಂಬಲಿಗರು ಸ್ವಾಗತಿಸಲಿದ್ದಾರೆ. ಬಳಿಕ ಚಾಮುಂಡಿಬೆಟ್ಟಕ್ಕೆ ತೆರಳಿ ದೇವಿ ದರ್ಶನ ಪಡೆದು, ನಂತರ ಸಂಜೆ 7 ಗಂಟೆಗೆ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣಧಾಮಕ್ಕೆ ಭೇಟಿ ನೀಡಿ ಪೇಜಾವರ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ಪಕ್ಷದ ಕಚೇರಿಯಲ್ಲಿ ರಾತ್ರಿ 8ಕ್ಕೆ ಸಭೆ ನಡೆಸಿ, ಬಳಿಕ ಸುತ್ತೂರು ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ.