ಈರುಳ್ಳಿ ಬೆಲೆ ಕೇಳಿದರೆ ಇನ್ನೂ ಕಣ್ಣೀರು!

ಮೈಸೂರು,ಡಿ.20(ಪಿಎಂ)-ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಇಳಿಮುಖವಾಗುವಂತೆ ಕಾಣುತ್ತಿಲ್ಲ. ಇದೇ ತಿಂಗಳ ಆರಂಭದಲ್ಲಿ 150 ರೂ. ಗಡಿ ದಾಟಿ 200ರ ಗಡಿ ಮುಟ್ಟಿದ್ದ ಕೆಜಿ ಈರುಳ್ಳಿ ಬೆಲೆ ಇಂದಿಗೂ ಇಳಿಕೆ ಕಂಡಿಲ್ಲ. ಮೈಸೂರು ನಗರ ದಲ್ಲಿ ಗುಣಮಟ್ಟದ ಈರುಳ್ಳಿ ಬೆಲೆ 120 ರೂ. ನಿಂದ 150 ರೂ.ವರೆಗೆ ಕಾಯ್ದುಕೊಂಡಿದೆ.

ಕೇಂದ್ರ ಸರ್ಕಾರ ಟರ್ಕಿಯಿಂದ 11 ಸಾವಿರ ಟನ್ ಈರುಳ್ಳಿ ಆಮದು ಮಾಡಿ ಕೊಂಡಿದ್ದರೂ ಇಡೀ ದೇಶದಲ್ಲಿ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಬಾರದಾಗಿದೆ ಎನ್ನ ಲಾಗುತ್ತಿದ್ದು, ಅದೇ ರೀತಿ ಮೈಸೂರಿನಲ್ಲಿ ಈರುಳ್ಳಿ ಬೆಲೆ ಗ್ರಾಹಕರ ಕಣ್ಣಲ್ಲಿ ನೀರು ತರಿಸುತಲಿದೆ. ಮೈಸೂರು ಜಿಲ್ಲಾಡಳಿತ ದಿಂದ ಈರುಳ್ಳಿ ದಾಸ್ತಾನು ಮಾಡುವುದನ್ನು 50 ಕ್ವಿಂಟಾಲ್‍ಗೆ ಮಿತಿಗೊಳಿಸಿದ್ದರೂ ಮೈಸೂರು ನಗರ ಸೇರಿದಂತೆ ವಿವಿಧ ಭಾಗ ಗಳಲ್ಲಿ ಈರುಳ್ಳಿ ಬೆಲೆ ಇಳಿಮುಖವಾಗಿಲ್ಲ.

ಇತ್ತೀಚೆಗೆ ಈರುಳ್ಳಿ ಬೆಲೆ ಗಗನ ಕುಸುಮ ವಾಗುತ್ತಿದ್ದು, 100 ರೂ. ಗಡಿ ದಾಟಿ ಗ್ರಾಹಕರನ್ನು ಕಂಗಾಲಾಗಿಸಿದೆ. ಕೇವಲ 10ರಿಂದ 20 ರೂ.ವರೆಗೆ ಮಾತ್ರ ಆಗಾಗ್ಗೆ ಕಡಿಮೆಯಾಗುತ್ತಿದೆಯಾದರೂ ಕೈಗೆಟಕು ವಂತೆ ಇಳಿಕೆಯಾಗುತ್ತಲೇ ಇಲ್ಲ ಎಂಬುದು ಗ್ರಾಹಕರಿಗೆ ತಲೆ ಬಿಸಿಯಾಗಿಸಿದೆ. ಬಹು ತೇಕ ಗ್ರಾಹಕರು ಈರುಳ್ಳಿ ಸಹವಾಸವೇ ಬೇಡವೆಂದು ನಿರ್ಧರಿಸಿದ್ದು, ಈರುಳ್ಳಿ ಖರೀದಿಯನ್ನೇ ಕೈಬಿಟ್ಟಿದ್ದಾರೆ.

ಶುಕ್ರವಾರ ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕೆಜಿಗೆ 100ರಿಂದ 120 ರೂ.ವರೆಗೆ ಇದ್ದು, ಬಹು ತೇಕ ಗ್ರಾಹಕರು ಬೆಲೆ ಕೇಳಿ ಕೊಳ್ಳದೇ ಮುಂದೆ ಸಾಗುತ್ತಿದ್ದ ದೃಶ್ಯ ಸಾಮಾನ್ಯ ವಾಗಿತ್ತು. `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ದೇವರಾಜ ಮಾರುಕಟ್ಟೆ ಈರುಳ್ಳಿ ವ್ಯಾಪಾರಿ ಆನಂದ್, `ಡಿಸೆಂಬರ್‍ಗೆ ಹೊಸ ಈರುಳ್ಳಿ ಬೆಳೆ ಕೊಯ್ಲು ಮಾಡ ಬೇಕಿತ್ತು. ಆದರೆ ನೆರೆ ಹಾವಳಿಯಿಂದ ಬಹುತೇಕ ಈರುಳ್ಳಿ ಬೆಳೆಗೆ ಹಾನಿಯಾ ಯಿತು. ಈಗ ಮತ್ತೆ ಈರುಳ್ಳಿ ನಾಟಿ ಮಾಡ ಬೇಕಿದ್ದು, ಈ ಬೆಳೆ ಫೆಬ್ರವರಿ ಕೊನೆ ವಾರ ಇಲ್ಲವೇ ಮಾರ್ಚ್‍ನಲ್ಲಿ ಕೊಯ್ಲಿಗೆ ಬರ ಲಿದೆ. ಅಲ್ಲಿಯವರೆಗೂ ಬೆಲೆ ನಿಯಂತ್ರಣಕ್ಕೆ ಬರುವುದು ಅನುಮಾನ’ ಎಂದರು.

ದೇವರಾಜ ಮಾರುಕಟ್ಟೆಗೆ ಟರ್ಕಿಯ ಈರುಳ್ಳಿಯನ್ನು ಸ್ಯಾಂಪಲ್‍ಗಾಗಿ ಕೆಲ ವರ್ತಕರು ತರಿಸಿಕೊಂಡಿದ್ದೆವು. ಆ ಈರುಳ್ಳಿ ನಮ್ಮ ಈರುಳ್ಳಿಯಷ್ಟು ರುಚಿ ಇಲ್ಲ. ಜೊತೆಗೆ 50 ಕೆಜಿಗೆ 10 ಕೆಜಿಯಷ್ಟು ಸಿಪ್ಪೆಯಿಂದ ಕೂಡಿರುತ್ತಿತ್ತು ಎಂದು ಆನಂದ್ ವಿವರಿಸಿದರು.

ಇನ್ನು ಮೈಸೂರಿನ ಎಂಜಿ ರಸ್ತೆ ಮಾರು ಕಟ್ಟೆಯಲ್ಲೂ ಈರುಳ್ಳಿ ಬೆಲೆ ಕೇಳಿ ಗ್ರಾಹಕರು ಕೊಳ್ಳಲು ಹಿಂದೇಟು ಹಾಕುತ್ತಿದ್ದರು. ವಿವಿಧ ಗುಣಮಟ್ಟದ ಈರುಳ್ಳಿ ಇಲ್ಲಿ ಲಭ್ಯವಿದ್ದು, 90 ರೂ.ನಿಂದ 150 ರೂ.ವರೆಗೆ ಈರುಳ್ಳಿ ಬೆಲೆ ಕಾಯ್ದುಕೊಂಡಿತ್ತು. `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಇಲ್ಲಿನ ಈರುಳ್ಳಿ ವ್ಯಾಪಾರಿ ಮಹೇಶ್, 10ರಿಂದ 20 ರೂ.ನಷ್ಟು ಮಾತ್ರವೇ ಮೊನ್ನೆ ಕಡಿಮೆ ಯಾಗಿತ್ತು. ಈಗ ಮತ್ತೆ 90ರಿಂದ 150 ರೂ.ವರೆಗೆ ಬೆಲೆ ಇದೆ. ಸಿಪ್ಪೆ ಕಡಿಮೆ ಇರುವ ದಪ್ಪ ಈರುಳ್ಳಿ 110ರಿಂದ 150 ರೂ.ವರೆಗೆ ಬೆಲೆ ಇದ್ದು, ಇದಕ್ಕಿಂತ ಇನ್ನಷ್ಟು ಗುಣ ಮಟ್ಟ ಕಡಿಮೆ ಇರುವ ಈರುಳ್ಳಿ 90 ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಈರುಳ್ಳಿ ಬೆಲೆ ಯಾವಾಗ ನಿಯಂತ್ರಕ್ಕೆ ಬರುತ್ತದೋ ಎಂಬ ಕನವರಿಕೆಯಲ್ಲಿ ಗ್ರಾಹ ಕರಿದ್ದಾರೆ. ಜೊತೆಗೆ ಈರುಳ್ಳಿಗೆ ಪರ್ಯಾ ಯವಾಗಿ ಯಾವ ತಿಂಡಿಗೆ ಏನು ಬಳಸ ಬಹುದು ಎಂಬ ಲೆಕ್ಕಾಚಾರದಲ್ಲೂ ತೊಡ ಗಿದ್ದಾರೆ. ಮೈಸೂರಿನ ವಿವಿಧ ಬಡಾವಣೆ ಗಳ ಚಿಲ್ಲರೆ ಅಂಗಡಿಗಳಲ್ಲೂ ಈರುಳ್ಳಿ 100 ರೂ. ಮೇಲೆಯೇ ಮಾರಾಟವಾಗು ತ್ತಿದ್ದು, ಮಾರುಕಟ್ಟೆಗೆ ಹೋಲಿಸಿದರೆ ಇಲ್ಲಿನ ಈರುಳ್ಳಿಯಲ್ಲಿ ಸಿಪ್ಪೆ ಹೆಚ್ಚಿರುವುದು ಬಹುತೇಕ ಕಡೆ ಕಂಡುಬಂದಿದೆ.