ಸೆ.4ರಂದು ವಿಶ್ವ ಕ್ಯಾನ್ಸರ್ ದಿನಾಚರಣೆ ವಿದ್ಯಾರ್ಥಿ ಜಾಥಾ, `ಬದುಕಿ ಬಂದವರು’ ಕೃತಿ ಬಿಡುಗಡೆ, ಉಪನ್ಯಾಸ

ಮೈಸೂರು,: ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಮೈಸೂರಿನಲ್ಲಿ ಸಂಜೀವಿನಿ ಕ್ಯಾನ್ಸರ್ ಕೇರ್ ಟ್ರಸ್ಟ್, ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಶ್ರಯದಲ್ಲಿ ಫೆ.4ರಂದು ಕ್ಯಾನ್ಸರ್ ಜಾಗೃತಿ ಜಾಥಾ ಮತ್ತು ಅಧ್ಯಾಪಕ ರಮೇಶ್ ಬಿಳಿಕೆರೆ ಅವರ `ಬದುಕಿ ಬಂದವರು’ ಕೃತಿ ಬಿಡುಗಡೆ, ಕ್ಯಾನ್ಸರ್ ಕುರಿತ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋ ಜಿಸಲಾಗಿದೆ. ಅಂದು ಬೆಳಿಗ್ಗೆ 8.50ಕ್ಕೆ ಮೈಸೂರಿನ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕ್ಯಾನ್ಸರ್ ಜಾಗೃತಿ ಜಾಥಾ ನಡೆಸಲಿದ್ದಾರೆ. ಮೇಯರ್ ಪುಷ್ಪಲತಾ ಜಗನ್ನಾಥ್, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಟಿ.ಹರೀಶ್‍ಗೌಡ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಸಿಟಿಇ ಪ್ರಾಂಶು ಪಾಲ ಜಿ.ಎನ್.ಪ್ರಭುಸ್ವಾಮಿ, ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಅಪ್ಪಯ್ಯ, ಪಾಲಿಕೆ ಮಾಜಿ ಸದಸ್ಯ ಸುನೀಲ್, ಸಂಜೀವಿನಿ ಕ್ಯಾನ್ಸರ್ ಕೇರ್‍ನ ಕಾರ್ಯ ದರ್ಶಿ ಸುನೀತಾ ಗಿರೀಶ್ ಭಾಗವಹಿಸಲಿದ್ದಾರೆ ಎಂದು ಸಂಜೀವಿನಿ ಕ್ಯಾನ್ಸರ್ ಕೇರ್ ಟ್ರಸ್ಟ್ ಸಂಸ್ಥಾಪಕ ರಮೇಶ್ ಬಿಳಿಕೆರೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಿಗ್ಗೆ 11 ಗಂಟೆಗೆ ಜೆ.ಕೆ.ಮೈದಾನದ ಅಮೃತ ಮಹೋತ್ಸವ ಭವನದಲ್ಲಿ ಅಧ್ಯಾಪಕ ರಮೇಶ್ ಬಿಳಿಕೆರೆ ಅವರ `ಬದುಕಿ ಬಂದವರು’ ಕೃತಿ ಬಿಡುಗಡೆಯನ್ನು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ನೆರವೇರಿಸಲಿದ್ದಾರೆ. ರಾಮಕೃಷ್ಣ ಆಶ್ರಮದ ಸ್ವಾಮಿ ಮಹೇಶಾತ್ಮ ನಂದಜೀ, ಚಿತ್ರನಟ ವಿಜಯ ರಾಘವೇಂದ್ರ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಸಿ.ಬಸವೇಗೌಡ ಇನ್ನಿತರರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕ್ಯಾನ್ಸರ್ ರೋಗವನ್ನು ಗೆದ್ದು ಬಂದವರನ್ನು ಸನ್ಮಾನಿಸಲಾಗುತ್ತದೆ ಎಂದರು.

ದುಬಾರಿ ಕ್ಯಾನ್ಸರ್ ಚಿಕಿತ್ಸಾ ವೆಚ್ಚ ಭರಿಸಲು ಬಡ ರೋಗಿಗಳು ಮನೆ, ಆಸ್ತಿ ಎಲ್ಲವನ್ನೂ ಕಳೆದುಕೊಂಡು ನಿರ್ಗತಿಕರಾಗುತ್ತಾರೆ. ಹೀಗಾಗಿ ಸರ್ಕಾರ ಕ್ಯಾನ್ಸರ್ ಪೀಡಿತರಿಗೆ ಹಾಗೂ ಕ್ಯಾನ್ಸರ್‍ನಿಂದ ಬದುಕುಳಿದವರಿಗೆ ಪ್ರತ್ಯೇಕ ಮಾಸಾಶನ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಆಂಟೋನಿ ವಿಕ್ಟರ್, ಕೆ.ವಿ.ಗಿರೀಶ್, ಎಂ.ಪಿ.ತೇಜಸ್ ಇದ್ದರು.