ಬಸ್ ಪಾಸ್ ದರ ಏರಿಕೆ ಪ್ರಸ್ತಾಪ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಮೈಸೂರು: ಬೆಂಗ ಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ವಿದ್ಯಾರ್ಥಿ ಬಸ್ ಪಾಸ್ ದರ ಏರಿಕೆ ಮಾಡಿದ್ದು, ಇದರ ಬೆನ್ನಲ್ಲೇ ಕೆಎಸ್ ಆರ್‍ಟಿಸಿ ಕೂಡ ವಿದ್ಯಾರ್ಥಿ ಬಸ್ ಪಾಸ್ ದರ ಹೆಚ್ಚಿಸಲು ನಿರ್ಧರಿಸಿದೆ ಎನ್ನಲಾಗಿದೆ.

ಇದರ ವಿರುದ್ಧ ಮೈಸೂರಿನಲ್ಲಿ ನೂರಾರು ವಿದ್ಯಾರ್ಥಿಗಳು ಶುಕ್ರವಾರ ಮಧ್ಯಾಹ್ನ ದಿಢೀರ್ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು ಡಿಸಿ ಕಚೇರಿ ಎದುರು ಎಐಡಿಎಸ್‍ಓ (ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟುಡೆಂಟ್ಸ್ ಆರ್ಗನೈಸೇಷನ್) ಸಂಘಟನೆ ನೇತೃತ್ವದಲ್ಲಿ ಮಹಾರಾಜ ಕಾಲೇಜು, ಶಾರದಾವಿಲಾಸ ಕಾಲೇಜು, ಹಾಡ್ರ್ವಿಕ್ ಕಾಲೇಜು ಸೇರಿದಂತೆ ವಿವಿಧ ಕಾಲೇಜು ವಿದ್ಯಾರ್ಥಿಗಳು ಜಮಾಯಿಸಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ರಾಜ್ಯ ಸರ್ಕಾರ ಕೆಎಸ್‍ಆರ್‍ಟಿಸಿ ಬಸ್ ಪಾಸ್ ಶುಲ್ಕವನ್ನು ಹಾಲಿ ಇರುವ ಮೊತ್ತಕ್ಕೆ ಸುಮಾರು 200 ರೂ. ಹೆಚ್ಚು ಮಾಡಲು ಮುಂದಾಗಿದೆ. ಪಾಸ್ ದರ ಏರಿಕೆಯಾ ದಲ್ಲಿ ವಿದ್ಯಾರ್ಥಿಗಳಿಗೆ ಭಾರೀ ಹೊರೆಯಾಗ ಲಿದೆ. ರಾಜ್ಯದಾದ್ಯಂತ ತೀವ್ರ ಬರ ಪರಿಸ್ಥಿತಿ ಇದ್ದು, ಈ ಸಂದರ್ಭದಲ್ಲಿ ಶುಲ್ಕವನ್ನು ಏರಿಕೆ ಮಾಡಿದರೆ, ಶಾಲಾ-ಕಾಲೇಜು ಬಿಡುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ರೈತಪರ, ಜನಪರ ಎಂದು ಹೇಳಿ ಕೊಂಡು ಅಧಿಕಾರಕ್ಕೆ ಬಂದ ಮೈತ್ರಿ ಸರ್ಕಾರ ಉಚಿತ ಬಸ್ ಪಾಸ್ ನೀಡುವುದಾಗಿ ಹೇಳಿ ನಂತರ ಆ ಪ್ರಸ್ತಾಪವನ್ನೇ ಕೈಬಿಟ್ಟಿತ್ತು. ಈಗ ಬಸ್ ಪಾಸ್ ದರವನ್ನೂ ಏರಿಕೆ ಮಾಡಿ ಅದೇ ರೈತರ, ಬಡವರ ಮಕ್ಕಳನ್ನು ಶೋಷಣೆ ಮಾಡಲು ಹೊರಟಿದೆ ಎಂದು ದೂರಿದರು. ಯಾವುದೇ ಕಾರಣಕ್ಕೂ ಪಾಸ್ ದರ ಏರಿಕೆ ಮಾಡಬಾರದು. ಒಂದು ವೇಳೆ ಮಾಡಿದರೆ ರಾಜ್ಯದಾದ್ಯಂತ ಬೀದಿಗಿಳಿದು ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ, ಜಿಲ್ಲಾ ಖಜಾಂಚಿ ಅಸಿಯಾ ಬೇಗಂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.