ಯಶಸ್ವಿಯಾದ ಎಸ್‍ಬಿಐ ಗೃಹ, ಕಾರು ಸಾಲ ಉತ್ಸವ

ಮೈಸೂರು: ಮೈಸೂರಿನ ಬಲ್ಲಾಳ್ ವೃತ್ತದಲ್ಲಿರುವ ನಿತ್ಯೋತ್ಸವ ಸಭಾಂಗಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ನಡೆದ ಎರಡು ದಿನಗಳ ಕಾಲ ಬೃಹತ್ ಗೃಹ ಮತ್ತು ಕಾರು ಸಾಲ ಉತ್ಸವ ಯಶಸ್ವಿಯಾಗಿ ನಡೆಯಿತು.

ಸುಮಾರು 36 ದೊಡ್ಡ ದೊಡ್ಡ ಬಿಲ್ಡರ್‍ಗಳು ಸ್ಟಾಲ್‍ಗಳಲ್ಲಿ ಗ್ರಾಹಕರಿಗೆ 2, 3, 4 ಬಿಹೆಚ್‍ಕೆ ಮನೆಗಳು, ವಿಲ್ಲಾಗಳ ಬಗ್ಗೆ ಮಾಹಿತಿ ನೀಡಿದರು. ನೂರಾರು ಮಂದಿ ತಮಗೆ ಅಗತ್ಯವಾದ ಮನೆಗಳ ಕುರಿತು ಮಾಹಿತಿ ಪಡೆದುಕೊಂಡರು. ಮೊದಲ ದಿನವೇ ಉದ್ಘಾಟನೆ ವೇಳೆ 20 ಕೋಟಿ ರೂ.ಗೂ ಹೆಚ್ಚಿನ ಸಾಲದ ವಹಿವಾಟು ನಡೆಯಿತು. ಇದೇ ಸಂದರ್ಭ ದಲ್ಲಿ 17 ಕಾರು ಡೀಲರುಗಳು ಉತ್ಸವದಲ್ಲಿ ಪಾಲ್ಗೊಂಡು ಗ್ರಾಹಕರಿಗೆ ವಿವಿಧ ಕಂಪನಿಗಳ ಕಾರುಗಳ ಬಗ್ಗೆ ಮಾಹಿತಿ ನೀಡಿದರು. ಮೇಯರ್ ಪುಷ್ಪಲತಾ ಜಗನ್ನಾಥ್ ಉತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಕ್ರೆಡಾಯ್ ಅಧ್ಯಕ್ಷ ಸುಬ್ರಹ್ಮಣ್ಯಂ, ಬಿಲ್ಡರ್ಸ್ ಅಸೋಸಿ ಯೇಷನ್ ಆಫ್ ಇಂಡಿಯಾ ಮೈಸೂರು ಅಧ್ಯಕ್ಷ ರತ್ನರಾಜ್, ಎಸ್‍ಬಿಐ ಬೆಂಗಳೂರು ಪ್ರಧಾನ ವ್ಯವಸ್ಥಾಪಕ ಮುರಳೀಧರನ್, ಮೈಸೂರು ಉಪ ಪ್ರಧಾನ ವ್ಯವಸ್ಥಾಪಕ ಅರುಣಗಿರಿ, ಹೋಮ್ ಲೋನ್ ವಿಭಾಗದ ಉಪ ವ್ಯವಸ್ಥಾಪಕ ರವಿಮೋಹನ್ ಮತ್ತಿತರರಿದ್ದರು.