ಸಾರ್ವತ್ರಿಕ ರೋಗ ನಿಯಂತ್ರಣಕ್ಕೆ ಸಹಕರಿಸಿ

ಬೀದಿ ಬದಿ ವ್ಯಾಪಾರಿಗಳಿಗೆ ಪಾಲಿಕೆ ಹೆಚ್ಚುವರಿ ಆಯುಕ್ತ ಎನ್.ಎಂ.ಶಶಿಕುಮಾರ್ ಮನವಿ
ಮೈಸೂರು, ಮಾ. 20(ಆರ್‍ಕೆ)- ಕೋವಿಡ್ -19(ಕರೋನಾ ವೈರಸ್) ಹಾಗೂ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಬೀದಿ ಬದಿ ವ್ಯಾಪಾರಿ ಗಳು ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರ ಪಾಲಿಕೆ ಯೊಂದಿಗೆ ಸಹಕರಿಸಬೇಕೆಂದು ಪಾಲಿಕೆ ಹೆಚ್ಚುವರಿ ಆಯುಕ್ತ ಎನ್.ಎಂ.ಶಶಿಕುಮಾರ ಮನವಿ ಮಾಡಿದ್ದಾರೆ.

ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್-19 ಮಾರಕ ರೋಗದ ವೈರಾಣು ಹರಡದಂತೆ ಪಾಲಿಕೆಯಿಂದ ಅಗತ್ಯ ಮುಂಜಾ ಗ್ರತಾ ಕ್ರಮಗಳನ್ನು ಕೈಗೊಂಡಿರುವುದರಿಂದ ಎಲ್ಲೆಂದರಲ್ಲಿ ರಸ್ತೆ ಬದಿ ಅಂಗಡಿಗಳನ್ನು ತೆರೆದು, ಆಹಾರ ತಯಾರಿಸಿ ಮಾರದೆ, ರೋಗ ನಿಯಂತ್ರಣಕ್ಕೆ ಕೈ ಜೋಡಿಸಿ ಎಂದು ಬೀದಿ ಬದಿ ಚಾಟ್ಸ್, ಟಿಫಾನಿಸ್ ವ್ಯಾಪಾರಿಗಳನ್ನು ಅವರು ಕೋರಿಕೊಂಡಿದ್ದಾರೆ.

ಸ್ವಚ್ಛತೆ ಕಾಪಾಡುವುದು, ಆಹಾರ ಸುರಕ್ಷತೆ, ಸಾಂಕ್ರಾಮಿಕ ರೋಗಗಳು ಹರಡದಂತೆ ನಿಯಂತ್ರಿಸಲು ಈಗಾಗಲೇ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ನಿತ್ಯ ನಿರಂತರವಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿರುವುದರಿಂದ ಬೀದಿ ಬದಿ ವ್ಯಾಪಾರಿಗಳು ಮುಕ್ತವಾಗಿ ಆಹಾರ ಪದಾರ್ಥ ತಯಾರಿಸಿ ಮಾರುವುದನ್ನು ನಿಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ. ಕುಡಿಯುವ ನೀರು, ಧೂಳು ಮಿಶ್ರಿತ ಆಹಾರ ಪದಾರ್ಥಗಳಿಂದ ಬಹುಬೇಗ ಸಾಂಕ್ರಾಮಿಕ ರೋಗಗಳ ಸೋಂಕು ಹರಡುವುದರಿಂದ ಕೆಲ ದಿನಗಳವರೆಗೆ ಅಂಗಡಿಗಳನ್ನು ತೆರೆಯ ಬಾರದೆಂದು ಶಶಿಕುಮಾರ್ ಬೀದಿ ಬದಿ ವ್ಯಾಪಾರಿಗಳಿಗೆ ಮನವಿ ಮಾಡಿದ್ದಾರೆ.