ಮೈಸೂರಲ್ಲಿ ಬೃಹತ್ ಪ್ರಮಾಣದ ಹಸಿ ಕಸ ಉತ್ಪತ್ತಿ ಬಗ್ಗೆ ಸರ್ವೆ ಆರಂಭ

ಮೈಸೂರು: ಬೃಹತ್ ಪ್ರಮಾಣದಲ್ಲಿ ಹಸಿ ಕಸ ಉತ್ಪತ್ತಿಯಾಗುವ ಮೂಲಗಳನ್ನು ಗುರುತಿಸಲು ಮೈಸೂರು ಮಹಾನಗರ ಪಾಲಿಕೆಯು ಸರ್ವೆ ಕಾರ್ಯ ಆರಂಭಿಸಿದೆ. ಘನ ತ್ಯಾಜ್ಯ ನಿರ್ವಹಣಾ ನಿಯಮ-2016ರ ಪ್ರಕಾರ 100 ಕೆ.ಜಿ.ಗಿಂತ ಹೆಚ್ಚು ಹಸಿ ಕಸ ಉತ್ಪತ್ತಿ ಮಾಡುವ ಹೋಟೆಲ್, ಮಾಲ್, ಅಪಾರ್ಟ್‍ಮೆಂಟ್, ಕಲ್ಯಾಣ ಮಂಟಪ, ಸಮುದಾಯ ಭವನಗಳು ಹಾಗೂ ಇನ್ನಿತರ ಅಂಗಡಿಗಳವರು ವೈಜ್ಞಾನಿಕ ವಾಗಿ ತಂತ್ರಜ್ಞಾನ ಬಳಸಿ ಕಸ ವಿಲೇವಾರಿ ಮಾಡಬೇಕು. ಆದರೆ ಅವರು ಉತ್ಪತ್ತಿ ಮಾಡುವ ಹಸಿ ಕಸವನ್ನು ಪಾಲಿಕೆಯೇ ವಿಲೇವಾರಿ ಮಾಡುತ್ತಿರುವುದರಿಂದ ನಿರ್ವಹಣಾ ವೆಚ್ಚ ಅಧಿಕವಾಗಲಿದ್ದು, ತೊಂದರೆಯೂ ಉಂಟಾಗುತ್ತಿರುವುದರಿಂದ ಎಲ್ಲಿ ಬೃಹತ್ ಪ್ರಮಾಣದ ಹಸಿ ಕಸ ಉತ್ಪತ್ತಿಯಾಗುತ್ತಿದೆ ಎಂಬುದನ್ನು ಪತ್ತೆ ಮಾಡಲು ಸರ್ವೆ ಕಾರ್ಯ ಆರಂಭಿಸ ಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ತಿಳಿಸಿದ್ದಾರೆ.

ಆಯಾ ವಲಯಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಆರೋಗ್ಯ ನಿರೀಕ್ಷಕರು ಹಾಗೂ ಪರಿಸರ ಇಂಜಿನಿಯರ್‍ಗಳು ಸಿಬ್ಬಂದಿಗಳೊಂದಿಗೆ ತೆರಳಿ ಪರಿಶೀಲನೆ ಮಾಡಿ 100 ಕೆ.ಜಿ.ಗಿಂತ ಹೆಚ್ಚು ಹಸಿ ಕಸ ಉತ್ಪತ್ತಿಯಾಗುವ ಸ್ಥಳಗಳನ್ನು ಗುರುತಿಸಿ ಪಟ್ಟಿ ಮಾಡುವರು ಎಂದರು. ತಮ್ಮಲ್ಲಿ ಉತ್ಪತ್ತಿಯಾಗುವ ಕಸದಿಂದ ಗೋಬರ್ ಗ್ಯಾಸ್ ಉತ್ಪಾದಿಸಬಹುದಲ್ಲದೆ, ಗೊಬ್ಬರವನ್ನೂ ತಯಾರಿಸಿ ತಮ್ಮದೇ ಲಾನ್ ಗಿಡಗಳಿಗೆ ಬಳಸಬಹುದು ಎಂಬುದರ ಬಗ್ಗೆ ಪಾಲಿಕೆ ಅಧಿಕಾರಿಗಳು, ಅಪಾರ್ಟ್‍ಮೆಂಟ್, ಕಲ್ಯಾಣ ಮಂಟಪ, ಹೋಟೆಲ್ ಮಾಲೀಕರಿಗೆ ಅರಿವು ಮೂಡಿಸುತ್ತಿದ್ದಾರೆ ಎಂದು ಶಿಲ್ಪಾನಾಗ್ ತಿಳಿಸಿದರು. ಅಲ್ಲದೆ ಹಸಿ ಕಸ ಮರು ಬಳಕೆ, ನಿರ್ವಹಣೆ ಹಾಗೂ ವಿಲೇವಾರಿ ಕುರಿತಂತೆ ಕಾರ್ಯಾಗಾರ ಏರ್ಪಡಿಸಿ ತರಬೇತಿ ಹಾಗೂ ಮಾರ್ಗದರ್ಶನವನ್ನೂ ನೀಡಲಾಗುವುದು ಎಂದರು.