ಮಡಿಕೇರಿ: ಕಕ್ಕಬ್ಬೆ ಸಮೀಪದ ತಡಿಯಂಡಮೋಲ್ ಬೆಟ್ಟದ ತಪ್ಪಲಿನಲ್ಲಿರುವ ಯವಕಪಾಡಿ ಗ್ರಾಮದಲ್ಲಿ ಶಂಕಿತ ನಕ್ಸಲರು ಪ್ರತ್ಯಕ್ಷರಾಗಿದ್ದು, ಅಲ್ಲಿನ ಮನೆಯೊಂದರಿಂದ ಅಕ್ಕಿ ಮತ್ತು ದಿನ ಬಳಕೆ ವಸ್ತುಗಳನ್ನು ಹೊತ್ತೊಯ್ದಿದ್ದಾರೆ. ಅನಿತಾ ಎಂಬುವರ ಮೊಬೈಲ್ ಫೋನ್ ಅನ್ನು ಕೂಡ ಕಿತ್ತುಕೊಂಡು ಹೋಗಿರುವ ಬಗ್ಗೆ ವರದಿ ಯಾಗಿದೆ. ಇದರಿಂದ ಗ್ರಾಮಸ್ಥರು ಭೀತಿಗೆ ಒಳಗಾಗಿದ್ದಾರೆ.
ಏ.25ರ ಮಧ್ಯಾಹ್ನ 12 ಗಂಟೆಯ ಸಮಯದಲ್ಲಿ ಅಂದಾಜು 35 ವರ್ಷ ಪ್ರಾಯದ ಯುವಕ ಮತ್ತು 40 ವರ್ಷ ಪ್ರಾಯದ, ಪುರುಷರ ರೀತಿಯ ಕೇಶ ವಿನ್ಯಾಸ ಹೊಂದಿದ್ದ ಮಹಿಳೆ ಗ್ರಾಮದಲ್ಲಿ ಪ್ರತ್ಯಕ್ಷರಾಗಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ನಾಪೋಕ್ಲು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ನಕ್ಸಲ್ ನಿಗ್ರಹ ದಳದ ಕಮಾಂಡೊ ಗಳು ಯವಕಪಾಡಿಗೆ ತೆರಳಿ ಕೂಂಬಿಂಗ್ ಸಹ ಆರಂಭಿಸಿದ್ದಾರೆ.
ಘಟನೆ ವಿವರ: ಕೊಡಗಿನ ಅತೀ ಎತ್ತರದ ಶಿಖರ ಎಂಬ ಖ್ಯಾತಿ ಹೊಂದಿರುವ ತಡಿಯಂಡಮೋಲ್ ಬೆಟ್ಟಶ್ರೇಣಿ ಕೇರಳಕ್ಕೂ ವಿಸ್ತರಿ ಸಿದ್ದು, ಈ ಭಾಗದ ಪಶ್ಚಿಮ ಘಟ್ಟ ಸಾಲಿನಲ್ಲಿ ನಿಷೇಧಿತ ನಕ್ಸಲರು ಸಕ್ರೀಯರಾಗಿದ್ದಾರೆ ಎನ್ನಲಾಗುತ್ತಿದೆ. ಮಾತ್ರವಲ್ಲದೇ ಈ ಘಟ್ಟ ಸಾಲಿನಲ್ಲಿ ನಕ್ಸಲರು ತಮ್ಮ ಕಾರಿಡಾರ್ ಹೊಂದಿದ್ದು, ಕೆಂಪು ಹೆದ್ದಾರಿಯಲ್ಲಿ ಚಲನ ವಲನ ಇದೆ ಎನ್ನಲಾಗಿದೆ. ತಡಿಯಂಡಮೋಲ್ ಬೆಟ್ಟ ತಪ್ಪಲಿ ನಲ್ಲಿರುವ ಯವಕಪಾಡಿ ಗ್ರಾಮದಲ್ಲಿ ಬೆರಳೆಣಿಕೆ ಯಷ್ಟು ಮನೆಗಳಿದ್ದು, ಪ್ರತೀ ಮನೆಗೂ ಹೆಚ್ಚು ಅಂತರವಿದೆ. ಏ.25 ರಂದು ಶಂಕಿತ ನಕ್ಸಲರು ಪ್ರತ್ಯಕ್ಷರಾದರು ಎನ್ನಲಾಗುತ್ತಿರುವ ಪ್ರದೇಶದಲ್ಲಿ ಕೇವಲ 5 ಮನೆಗಳು ಮಾತ್ರವೇ ಇದ್ದು, ಈ ಸ್ಥಳದಲ್ಲಿ ಕಾರ್ಯಪ್ಪ ಮತ್ತು ಕುಟ್ಟಪ್ಪ ಎಂಬು ವರ ಮನೆಗಳು ಮಾತ್ರವೇ ಕೂಗಳತೆಯ ಅಂತರದಲ್ಲಿವೆ. ಬೆಳಿಗ್ಗೆ 8.30ರ ಸಮಯದಲ್ಲಿ ಇಲ್ಲಿನ ಒಂದೇ ಕುಟುಂಬ ನಿವಾಸಿಗಳಾದ ಕಾರ್ಯಪ್ಪ, ಪೂವಮ್ಮ, ಅರ್ಜುನ, ಕುಶಾಲಪ್ಪ, ಪೊನ್ನಪ್ಪ ಹಾಗೂ ಕುಟ್ಟಪ್ಪ, ಪ್ರೇಮ ಮತ್ತು ರಾಜೇಶ್ ಎಂಬುವರು ತಾವಿರುವ ಮನೆಯಿಂದ 4ಕಿ.ಮೀ ದೂರದಲ್ಲಿ ರಸ್ತೆ ಕೆಲಸಕ್ಕೆಂದು ತೆರಳಿದ್ದರು. ಈ ಸಂದರ್ಭ ಕಾರ್ಯಪ್ಪ ಎಂಬುವರ ಪತ್ನಿ ಅನಿತಾ ಮತ್ತು ಇಬ್ಬರು ಪುಟ್ಟ ಮಕ್ಕಳು ಮಾತ್ರವೇ ಮನೆಯಲ್ಲಿದ್ದರು. ಅನಿತಾ ತಮ್ಮ ಪತಿಯೊಂದಿಗೆ ದೂರವಾಣಿ ಮೂಲಕ ಮಾತನಾಡುತ್ತಿದ್ದ ಸಂದರ್ಭ ಸುಮಾರು 12 ಗಂಟೆಯ ವೇಳೆಗೆ ಮನೆ ಪಕ್ಕದ ಕಾಫಿ ತೋಟದ ಒಳಗಿಂದ ಓರ್ವ ಮಹಿಳೆ, ಅನಿತಾ ಅವರ ಬಳಿ ಬಂದು ಮೊಬೈಲ್ ಕಿತ್ತುಕೊಂಡಿದ್ದಾಳೆ. ಆಕೆ ಜೊತೆಯಲ್ಲಿದ್ದ 35 ವರ್ಷ ಪ್ರಾಯದ ಯುವಕ ಕುಟ್ಟಪ್ಪ ಪ್ರೇಮ ದಂಪತಿಯ ಪುತ್ರ ರಾಜೇಶ್ ಎಂಬಾತನ ಮನೆಗೆ ನುಗ್ಗಿ ಅಂದಾಜು 10 ಕೆಜಿ ಅಕ್ಕಿಯನ್ನು ಗಂಟು ಕಟ್ಟಿದ್ದಾನೆ. ಸ್ಥಳದಿಂದ ಹೋಗುವ ಮುನ್ನ ಅನಿತಾ ಅವರಿಗೆ ಈ ಕುರಿತು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಸಿ, ನಂತರ ಮನೆಯ ಸಮೀಪವೇ ಮೊಬೈಲನ್ನು ಎಸೆದು ಮಹಿಳೆ ಮತ್ತು ಯುವಕ ಕಾಲ್ಕಿತ್ತಿದ್ದಾರೆ. ಇದರಿಂದ ಹೆದರಿದ ಅನಿತಾ ಮನೆಯಲ್ಲಿದ್ದ ಮತ್ತೊಂದು ಮೊಬೈಲ್ ನಿಂದ ಪತಿ ಕಾರ್ಯಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ. 40 ವರ್ಷ ಪ್ರಾಯದ ಮಹಿಳೆ ಕಾಫಿ ಬಣ್ಣದ ಚೂಡಿದಾರ್ ಧರಿಸಿದ್ದರೆ, ಯುವಕ ಕಪ್ಪು ಬಣ್ಣದ ಜರ್ಕಿನ್ ಧರಿಸಿದ್ದ. ಇವರು ಯಾವುದೇ ಶಸ್ತ್ರಗಳನ್ನು ಹೊಂದಿರಲಿಲ್ಲ ಎಂದು ಅನಿತಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಸಿದ್ದಯ್ಯ, ನಾಪೋಕ್ಲು ಠಾಣೆಯ ಉಪ ನಿರೀಕ್ಷಕ ರೇಣುಕಾ ಪ್ರಸಾದ್, ಸಿಬ್ಬಂದಿ ನಿತೀನ್, ಶರತ್, ಬಷೀರ್ ಹಾಗೂ ಗುಪ್ತಚರ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಕುರಿತು ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆಯನ್ನು ಚುರುಕುಗೊಳಿಸಲಾಗಿದೆ.
ನಕ್ಸಲರ ಸುಳಿವಿಲ್ಲ: ಎಸ್ಪಿ ಸ್ಪಷ್ಟನೆ
ಮಡಿಕೇರಿ: ಶಂಕಿತ ನಕ್ಸಲರು ಕೊಡಗು ಜಿಲ್ಲೆಯ ಯವಕಪಾಡಿಗೆ ಬಂದು ಮನೆಯೊಂದ ರಿಂದ ಮೊಬೈಲ್, ಅಕ್ಕಿಯನ್ನು ಕೊಂಡೊ ಯ್ದಿದ್ದಾರೆ ಎಂಬ ಮಾಹಿತಿಯನ್ವಯ ಕೊಡಗು ಪೆÇಲೀಸರು ಗ್ರಾಮಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಆದರೆ, ಈ ವ್ಯಾಪ್ತಿ ಯಲ್ಲಿ ನಕ್ಸಲರ ಸುಳಿವು ಕಂಡು ಬಂದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಡಾ.ಸುಮನ್ ಪೆನ್ನೇಕರ್ ತಿಳಿಸಿದ್ದಾರೆ. ಈ ಸಂದರ್ಭ ಗ್ರಾಮದ ಮನೆಯ ಮಹಿಳೆಗೆ ನಕ್ಸಲರ ಫೋಟೋ ತೋರಿಸಿದಾಗ ತನ್ನ ಮನೆಗೆ ಬಂದಿದ್ದ ವ್ಯಕ್ತಿ ಗಳಿಗೂ, ಬಂದಿದ್ದ ನಕ್ಸಲರ ಭಾವಚಿತ್ರಕ್ಕೂ ಹೋಲಿಕೆಯಾಗಿಲ್ಲ. ನಕ್ಸಲರು ಸಾಮಾನ್ಯವಾಗಿ ಧರಿಸುವ ಸಮವಸ್ತ್ರಗಳನ್ನು ತಮ್ಮ ಮನೆಗೆ ಬಂದವರು ಧರಿಸಿರಲಿಲ್ಲ. ಅಂತೆಯೇ ಯಾವುದೇ ಆಯುಧಗಳನ್ನೂ ಹೊಂದಿರಲಿಲ್ಲ. ಅವರು ಅಕ್ಕಿಯನ್ನು ಪಡೆದಿರುವ ಬಗ್ಗೆ ಮಾಹಿತಿ ಇಲ್ಲ. ಮೊಬೈಲ್ ಸಹ ಮನೆಯ ಪಕ್ಕದಲ್ಲೇ ಬಿದ್ದಿದೆ ಎಂದಿದ್ದಾರೆ.