ಡಿಯೋ ಸ್ಕೂಟರ್‍ಗೆ ಸ್ವಿಫ್ಟ್ ಡಿಸೈರ್ ಕಾರು ಡಿಕ್ಕಿ: ಮೈಸೂರಲ್ಲಿ ಕೇರಳ ಯುವಕ ಸಾವುಮತ್ತೋರ್ವನಿಗೆ ಗಾಯ

ಮೈಸೂರು: ಮಾರುತಿ ಸ್ವಿಫ್ಟ್ ಡಿಸೈರ್ ಕಾರೊಂದು ಡಿಯೋ ಸ್ಕೂಟರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಕೇರಳದ ಯುವಕನೋರ್ವ ಸ್ಥಳದಲ್ಲೇ ಸಾವನ್ನ ಪ್ಪಿದ್ದು, ಮತ್ತೋರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ಮೈಸೂರಿನ ಜೆ.ಕೆ. ಮೈದಾನದ ಬಳಿಯ ಸಿಗ್ನಲ್ ಲೈಟ್ ಸರ್ಕಲ್‍ನಲ್ಲಿ ಇಂದು ಮುಂಜಾನೆ ಸಂಭವಿಸಿದೆ.

ಕೇರಳದ ವೈನಾಡಿನ ಅರವಿಂದ(20) ಸಾವನ್ನಪ್ಪಿದವನು. ಘಟನೆಯಿಂದ ತೀವ್ರವಾಗಿ ಗಾಯಗೊಂಡಿರುವ ವಿಪಿನ್(21)ನನ್ನು ಕೆ.ಆರ್.ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಹಳೇ ಆರ್‍ಎಂಸಿ ಕಡೆಯಿಂದ ಡಿಯೋ ಸ್ಕೂಟರ್‍ನಲ್ಲಿ ಗಾಯತ್ರಿ ಭವನ ಕಡೆಗೆ ಹೋಗು ತ್ತಿದ್ದ ವೇಳೆ ರೈಲ್ವೇ ನಿಲ್ದಾಣದ ಕಡೆಯಿಂದ ವೇಗವಾಗಿ ಬಂದ ಮಾರುತಿ ಸ್ವಿಫ್ಟ್ ಡಿಸೈರ್ (ಕೆಎ 09-ಬಿ 0372) ಯಲ್ಲೋ ಬೋರ್ಡ್ ಕಾರು ಮುಂಜಾನೆ ಸುಮಾರು 4 ಗಂಟೆ ವೇಳೆಗೆ ಜೆಕೆ ಮೈದಾನದ ಸಿಗ್ನಲ್ ಲೈಟ್ ಸರ್ಕಲ್‍ನಲ್ಲಿ ಸ್ಕೂಟರ್‍ಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಅರವಿಂದ ಪಕ್ಕದಲ್ಲಿದ್ದ ಸಿಗ್ನಲ್ ಲೈಟ್‍ಗೆ ಬಡಿದು ನಂತರ ಚೆಲುವಾಂಬ ಆಸ್ಪತ್ರೆ ಕಾಂಪೌಂಡ್ ಒಳಭಾಗಕ್ಕೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಹಿಂಬದಿ ಸವಾರ ವಿಪಿನ್ ಎಡ ಭಾಗದ ಮೈಸೂರು ಮೆಡಿಕಲ್ ಕಾಲೇಜು ಕಟ್ಟಡದ ಮೂಲೆಗೆ ಸಿನಿಮಾ ಶೈಲಿಯಲ್ಲಿ ಹಾರಿ ಬಿದ್ದಿದ್ದಾನೆ. ಕಾಲಿಗೆ ತೀವ್ರ ಗಾಯಗಳಾದ ಆತನನ್ನು ಸಾರ್ವಜನಿಕರು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದರು. ಡಿಯೋಗೆ ಡಿಕ್ಕಿ ಹೊಡೆದ ಸ್ವಿಫ್ಟ್ ಡಿಸೈರ್ ಕಾರು, ನಂತರ ಚೆಲುವಾಂಬ ಆಸ್ಪತ್ರೆ ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದು ನಿಂತಿದೆ. ವಿಷಯ ತಿಳಿದ ತಕ್ಷಣ ಎನ್‍ಆರ್ ಸಂಚಾರ ಠಾಣೆ ಇನ್‍ಸ್ಪೆಕ್ಟರ್ ಯೋಗೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿ, ವಾಹನಗಳನ್ನು ವಶಕ್ಕೆ ಪಡೆದುಕೊಂಡರು.

ಸಂಚಾರ ವಿಭಾಗದ ಎಸಿಪಿ ಜಿ.ಎನ್.ಮೋಹನ್ ಸಹ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಎನ್‍ಆರ್ ಸಂಚಾರ ಠಾಣೆ ಪೊಲೀಸರು, ಕೇರಳದಿಂದ ಪೋಷಕರನ್ನು ಕರೆಸಿ ಇಂದು ಮಧ್ಯಾಹ್ನ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅರವಿಂದನ ದೇಹವನ್ನು ಅವರಿಗೆ ಒಪ್ಪಿಸಿದರು. ಭಾನುವಾರ ಮಧ್ಯಾಹ್ನ ವೈನಾಡಿನಿಂದ ಹೊರಟ ಯುವಕರು, ಡಿಯೋ ಸ್ಕೂಟರ್‍ನಲ್ಲೇ ಮೈಸೂರಿಗೆ ಬಂದು ತಂಗಲು ರೂಂ ಸಿಗದ ಕಾರಣ ರಾತ್ರಿಯಿಡೀ ಅಲ್ಲಿ ಇಲ್ಲಿ ಕಾಲ ಕಳೆದು ಮುಂಜಾನೆ ಗಾಯಿತ್ರಿ ಭವನ ಕಡೆಗೆ ಹೋಗುತ್ತಿದ್ದಾಗ ಕಾರು ಯಮನಂತೆ ಬಂದು ಅಪ್ಪಳಿಸಿದೆ.