ಜೀತಮುಕ್ತ ಕಾರ್ಮಿಕರು ಸ್ವಂತ ಊರಿಗೆ

ತಹಸೀಲ್ದಾರ್ ನಗದು, ಚೆಕ್ ಪ್ರಮಾಣ ಪತ್ರ ವಿತರಣೆ
ಬೈಲಕುಪ್ಪೆ:  ಜೀತಮುಕ್ತ 15 ಕೂಲಿ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ತಲುಪಿಸುವಂತೆ ಉಪವಿಭಾಗಾ ಧಿಕಾರಿ ಕೆ.ನಿತೀಶ್ ನೀಡಿದ ಆದೇಶದಂತೆ ತಲಾ 3 ಸಾವಿರ ನಗದು 17 ಸಾವಿರ ಚೆಕ್ ಹಾಗೂ ಜೀತಮುಕ್ತ ಪ್ರಮಾಣ ಪತ್ರವನ್ನು ಜೀತಮುಕ್ತರಿಗೆ ತಹಸಿಲ್ದಾರ್ ಜೆ. ಮಹೇಶ್ ಮಂಗಳವಾರ ವಿತರಿಸಿದರು.

ಪಿರಿಯಾಪಟ್ಟಣ ತಾಲೂಕು ಬೈಲಕುಪ್ಪೆ ಟಿಬೇಟಿಯನ್ ನಿರಾಶ್ರಿತರ ಶಿಬಿರದಲ್ಲಿ ಶುಂಠಿ ಕೆಲಸಕ್ಕೆಂದು ಬಂದು ಜೀತದಾಳು ಗಳಾಗಿದ್ದ 15 ಮಂದಿಗೆ ಹುಣಸವಾಡಿ ಬಿಸಿಎಂ ಹಾಸ್ಟೆಲ್‍ನಲ್ಲಿ ತಾಲೂಕು ಆಡಳಿತದ ವತಿಯಿಂದ ತಂಗುವ ವ್ಯವಸ್ಥೆ ಮಾಡಲಾಗಿತ್ತು.

ಈ ವೇಳೆ ತಹಸಿಲ್ದಾರ್ ಜೆ.ಮಹೇಶ್ ಮಾತನಾಡಿ, ಜೀತಮುಕ್ತ ಪದ್ಧತಿ ಪ್ರಕಾರ ಪ್ರತಿಯೊಬ್ಬರಿಗೂ ಜಿಲ್ಲಾಡಳಿತದಿಂದ ತಲಾ 3ಸಾವಿರ ನಗದು, 17ಸಾವಿರ ಚೆಕ್ ಹಾಗೂ ಪ್ರಮಾಣ ಪತ್ರ ವಿತರಿಸಿದ್ದು, ಅವರನ್ನು ಮೈಸೂರಿನವರೆಗೂ ತಲುಪಿಸಿ ಅಲ್ಲಿಂದ ರೈಲಿನ ಮೂಲಕ ಅವರವರ ಸ್ವಂತ ಊರು ಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಕ್ರಮಕ್ಕೆ ಸೂಚನೆ: ಟಿಬೇಟಿಯನ್ನರು ಅಕ್ರಮವಾಗಿ ತಮ್ಮ ಜಮೀನನ್ನು ಕೆಲವರಿಗೆ ಗುತ್ತಿಗೆಗೆ ನೀಡಿರುವುದು ಬೆಳಕಿಗೆ ಬಂದಿದೆ. ಆರ್.ಐ. ವರದಿ ನಂತರ ನಿಯಮ ಉಲ್ಲಂಘಿ ಸುವ ಟಿಬೇಟಿಯನ್ನರ ಜಮೀನನ್ನು ವಶಕ್ಕೆ ಪಡೆಯುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮಕೈಗೊಳ್ಳಲಾಗುವುದು.

ಈ ಸಂದರ್ಭದಲ್ಲಿ ಐ.ಜಿ.ಎಂ. ಸಂಸ್ಥೆಯ ವೇಣುಗೋಪಾಲ್, ಕಂದಾಯ ಅಧಿಕಾರಿ ಸಿ.ಮಹೇಶ್, ಕಾರ್ಮಿಕ ಇಲಾಖೆ ಅಧಿಕಾರಿ ಅರುಣ್‍ಕುಮಾರ್, ಲೆಕ್ಕಾಧಿಕಾರಿ ಎನ್.ಕೆ. ಪ್ರದೀಪ್, ಉಪವಿಭಾಗಾಧಿಕಾರಿಗಳ ಕಛೇರಿಯ ಸಿಬ್ಬಂದಿ ಮಹೇಶ್ ಮತ್ತು ವೆಂಕಟೇಶ್, ಬೈಲಕುಪ್ಪೆ ಪೊಲೀಸ್ ಸಿಬ್ಬಂದಿ ಹಾಗೂ ಕಾರ್ಮಿಕರು ಹಾಜರಿದ್ದರು.