ಮಾಹಿತಿ ನೀಡದ ತಹಶೀಲ್ದಾರ್‍ಗೆ 15 ಸಾವಿರ ದಂಡ

ಮಂಡ್ಯ, ಡಿ.29(ನಾಗಯ್ಯ)- ಸಾರ್ವಜನಿಕ ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೋರಿ ಸಲ್ಲಿಸಿದ್ದ ಅರ್ಜಿಗೆ ಮಾಹಿತಿ ನೀಡದ ಲೋಪದ ಮೇಲೆ ಮದ್ದೂರು ತಹಸೀಲ್ದಾರ್‍ಗೆ 15 ಸಾವಿರ ದಂಡವಿಧಿಸಿ ಮಾಹಿತಿ ಹಕ್ಕು ಆಯೋಗವು ಆದೇಶಿಸಿದೆ.

ಈ ಹಿಂದೆ ಮದ್ದೂರಿನಲ್ಲಿ ಕಾರ್ಯ ನಿರ್ವಹಿಸಿದ್ದ ಹಾಲಿ ಹೊಸಕೋಟೆ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಗೀತಾ ಅವರಿಗೆ ಮಾಹಿತಿ ಆಯೋಗ 15 ಸಾವಿರ ರೂ.ದಂಡ ವಿಧಿಸಿದೆ.

ಏನಿದು ಪ್ರಕರಣ: ಮದ್ದೂರು ತಾಲೂಕು ತಹಶೀಲ್ದಾರ್ ಆಗಿ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಗೀತಾ ರವರಿಗೆ ಎನ್.ಶಿವರಾಮು ಎಂಬುವರು ಕೊಪ್ಪ ಹೋಬಳಿಯ ಮಾರಸಿಂಗನಹಳ್ಳಿ ಗ್ರಾಮದ ದೇವೇಗೌಡ ಬಿನ್ ಕೆಂಚೇಗೌಡ ಇವರಿಗೆ ಸರ್ವೇ ನಂ 125 / ಸಿ ರಲ್ಲಿ 1 ಎಕರೆ 11ಗುಂಟೆ ಜಮೀನು ಮಂಜೂರು ಮಾಡಲಾಗಿದ್ದ ಜಮೀನಿನ ಸಂಬಂಧ ಸಾಗುವಳಿ ಚೀಟಿ / ಸಾಗುವಳಿ ಚೀಟಿ ವಿತರಣಾ ವಹಿಯ ನಕಲು ಪ್ರತಿ ಒದಗಿಸುವಂತೆ 2007ರ ಜೂನ್ 27ರಂದು ಅರ್ಜಿ ಸಲ್ಲಿಸಿದ್ದರು.

ಸಾರ್ವಜನಿಕ ಮಾಹಿತಿ ಅಧಿಕಾರಿಯಾದ ತಹಶೀಲ್ದಾರ್ ರವರು ಎರಡುವರೆ ವರ್ಷಗಳಾ ದರೂ ಯಾವುದೇ ಮಾಹಿತಿ ನೀಡದೆ ಸತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿದಾರ ಎನ್.ಶಿವರಾಮು ಅವರು ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಮಾಹಿತಿ ಆಯೋಗದಲ್ಲಿ ವಿಚಾರಣೆ ನಡೆಸಿ ಅರ್ಜಿದಾರರಿಗೆ ಮುಂದಿನ ದಿನಾಂಕದೊಳಗೆ ಮಾಹಿತಿ ನೀಡಬೇಕೆಂದು ಮಾಹಿತಿ ಆಯುಕ್ತ ಎಸ್.ಎಸ್.ಪಾಟೀಲ್ ಆದೇಶ ಮಾಡಿದ್ದರು.

ಆದರೆ ಸತತ ವಿಚಾರಣೆ ನಡೆದು ಪ್ರತಿವಾದಿಯಾದ ತಹಶೀಲ್ದಾರ್ ಗೀತಾ ಆಯೋಗಕ್ಕೆ ಖುದ್ದಾಗಿ ಹಾಜರಾಗಬೇಕೆಂದು ತಿಳಿಸಿದರೂ, ಸೂಕ್ತ ಕಾರಣಗಳನ್ನು ನೀಡದೆ ಗೈರು ಹಾಜರಾಗಿದ್ದರು. ಆಯೋಗದ ಆದೇಶ ಪಾಲಿಸದಿದ್ದುದನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತ ಎಸ್.ಎಸ್.ಪಾಟೀಲ್ ಅವರು ತಹಶೀಲ್ದಾರ್ ಗೀತಾ ಅವರಿಗೆ 15 ಸಾವಿರ ದಂಡ ವಿಧಿಸಿ ಅವರ ಪ್ರತಿ ತಿಂಗಳ ಸಂಬಳದಲ್ಲಿ 3 ಕಂತುಗಳಲ್ಲಿ 5 ಸಾವಿರ ರೂ.ನಂತೆ ಒಟ್ಟು 15 ಸಾವಿರ ರೂ. ಕಟಾವಣೆ ಮಾಡಿ ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮಾ ಮಾಡುವಂತೆ ಆದೇಶ ಹೊರಡಿಸಿದ್ದಾರೆ.