ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಿ

ಪಿಡಿಓಗಳಿಗೆ ಜಿಪಂ ಉಪಾಧ್ಯಕ್ಷ ಹೆಚ್.ಪಿ.ಸ್ವರೂಪ್ ಸೂಚನೆ
ಹಾಸನ: ತಾಲೂಕಿನ ಯಾವ ಭಾಗದಲ್ಲೂ ಕುಡಿಯುವ ನೀರಿಗೆ ಸಮಸ್ಯೆ ಯಾಗದಂತೆ ನಿಗಾ ವಹಿಸುವಂತೆ ಜಿಪಂ ಉಪಾಧ್ಯಕ್ಷ ಹೆಚ್.ಪಿ.ಸ್ವರೂಪ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಓ) ಸೂಚನೆ ನೀಡಿದರು.

ನಗರದ ತಮ್ಮ ಕಚೇರಿಯಲ್ಲಿ ಮಂಗಳವಾರ ಕರೆಯಲಾಗಿದ್ದ ಹಾಸನ ತಾಲೂಕು ಪಿಡಿಓಗಳ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಿಯೂ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಬಾರದು. ಈ ಹಿನ್ನೆಲೆಯಲ್ಲಿ ಓವರಲ್ ಟ್ಯಾಂಕ್, ಕೊಳವೆ ಬಾವಿ, ಪೈಪ್‍ಲೈನ್ ಅಳವಡಿಕೆ ಸೇರಿದಂತೆ ನೀರು ಪೂರೈಕೆಯಲ್ಲಿ ಯಾವುದೇ ರಾಜಕೀಯ ಮಾಡಬಾರದು ಎಂದರು. ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದರು. ತಾಲೂಕಿನ ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆಯೋ ಅದರ ಬಗ್ಗೆ ವರದಿ ತಯಾರಿಸಿ ಕಳಿಸಿಕೊಡಿ. ಅದಕ್ಕೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿಸಿಕೊಡಲಾಗುವುದು. ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೂ ಚರ್ಚಿಸಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು. ಲೋಕಸಭೆ ಚುನಾವಣಾ ನೀತಿಸಂಹಿತೆ ಜಾರಿ ಹಿನ್ನೆಲೆಯಲ್ಲಿ ಕಳೆದ ಹಲವು ತಿಂಗಳಿಂದ ಗ್ರಾಪಂ ಮಟ್ಟದಲ್ಲಿ ಗ್ರಾಮ ಸಭೆಗಳು ನಡೆದಿಲ್ಲ. ತಕ್ಷಣವೇ ಗ್ರಾಮಸಭೆ, ವಾರ್ಡ್ ಸಭೆಗಳನ್ನು ಆಯೋಜಿಸಿ ಜನರ ಸಮಸ್ಯೆಗೆ ಸ್ಪಂದಿಸಿ.

ಜೊತೆಗೆ ವಸತಿ ಯೋಜನೆಗೆ ಸಂಬಂಧಿಸಿದಂತೆ ಯಾವ ಯಾವ ಗ್ರಾಪಂಗಳಿಗೆ ಎಷ್ಟೆಷ್ಟು ಮನೆಗಳ ಅಗತ್ಯವಿದೆ ಎಂಬುದರ ಬಗ್ಗೆ ಪಟ್ಟಿ ತಯಾರಿಸಿ ಕೊಡುವಂತೆ ತಿಳಿಸಿದರು. ಕುಡಿಯುವ ನೀರಿನ ಬಗ್ಗೆ ಮುಂದಿನ ದಿನಗಳಲ್ಲಿ ತಾಲೂಕು ಮಟ್ಟಗಳಲ್ಲಿ ಸಭೆ ಕರೆದು ಚರ್ಚಿಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುವುದು ಎಂದರು. ಈ ಸಂದರ್ಭ ಜಿಪಂ ನೂತನ ಉಪಾಧ್ಯಕ್ಷ ಹೆಚ್.ಪಿ.ಸ್ವರೂಪ್ ಅವರನ್ನು ಹಾಸನ ತಾಲೂಕು ಪಿಡಿಓ ಅಧಿಕಾರಿಗಳು ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಿದರು.